ಕೇರಳದಲ್ಲಿ ಲಾಕ್ ಡೌನ್ ಸಡಿಲಿಕೆ: ವಾರಾಂತ್ಯ ಕರ್ಫ್ಯೂ ರವಿವಾರಕ್ಕೆ ಮಾತ್ರ ಸೀಮಿತ

Update: 2021-08-04 09:28 GMT
ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್

ಕಾಸರಗೋಡು, ಆ.4: ಕೇರಳದಲ್ಲಿ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಲಾಗಿದ್ದು, ವಾರಾಂತ್ಯ ಸಂಪೂರ್ಣ ಲಾಕ್  ಡೌನ್ ನ್ನು ರವಿವಾರ ಒಂದೇ ದಿನಕ್ಕೆ ಸೀಮಿತಗೊಳಿಸಲಾಗಿದೆ. ಎಲ್ಲಾ ವ್ಯಾಪಾರ ಮಳಿಗೆಗಳನ್ನು ಸೋಮವಾರದಿಂದ ಶನಿವಾರ ತನಕ ಬೆಳಗ್ಗೆ 7ರಿಂದ ರಾತ್ರಿ 9ರ ತನಕ  ತೆರೆಯಲು ಅವಕಾಶ ನೀಡಲಾಗಿದೆ.

ವಿಧಾನಸಭೆಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ಸ್ವಾತಂತ್ರ್ಯ ದಿನವಾದ ಆಗಸ್ಟ್ 15ರಂದು ಹಾಗೂ ಓಣಂ ಹಿನ್ನಲೆಯಲ್ಲಿ ಆಗಸ್ಟ್ 22ರಂದು ರವಿವಾರ ಆಗಿರುವುದರಿಂದ ಅಂದು ವಾರಾಂತ್ಯ ಲಾಕ್ ಡೌನ್ ನಿಂದ ವಿನಾಯಿತಿ ನೀಡಲಾಗಿದ್ದು, ವ್ಯಾಪಾರ ಮಳಿಗೆಗಳನ್ನು ತೆರೆಯಬಹುದಾಗಿದೆ. ಈ ಹಿಂದೆ ಟೆಸ್ಟ್ ಪಾಸಿಟಿವಿಟಿ ಆಧಾರದಲ್ಲಿ ಜಾರಿಗೆ ತರಲಾಗುತ್ತಿದ್ದ ನಿಯಂತ್ರಣಗಳನ್ನು ಹಿಂದೆಗೆದುಕೊಂಡಲಾಗಿದೆ. ಸೋಂಕು ಹರಡುವಿಕೆ ಆಧಾರದದಲ್ಲಿ ವಾರಕ್ಕೊಮ್ಮೆ ಸ್ಥಳೀಯ ಮಟ್ಟದಲ್ಲಿ ನಿಯಂತ್ರಣ ಜಾರಿಗೆ ತರಲಾಗುವುದು ಎಂದು ವಿವರಿಸಿದರು.
ಪ್ರಾರ್ಥನಾ ಮಂದಿರಗಳಲ್ಲಿ ವಿಸ್ತೀರ್ಣದ ಆಧಾರದಲ್ಲಿ  ಭಕ್ತರಿಗೆ ಪ್ರವೇಶ ನೀಡಲಾಗುವುದು. ಒಂದು ಬಾರಿ 40 ಮಂದಿಗೆ ಮಾತ್ರ ಅವಕಾಶ. ವಿವಾಹ ಹಾಗೂ ಅಂತ್ಯಕ್ರಿಯೆ ಹಾಗೂ ಮರಣಾನಂತರ ಕಾರ್ಯಕ್ರಮಕ್ಕೆ ತಲಾ 20 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಒಂದು ವಾರದಲ್ಲಿ 1,000 ಮಂದಿಯಲ್ಲಿ 10 ಮಂದಿಗೆ ಪಾಸಿಟಿವ್ ಕಂಡುಬಂದಲ್ಲಿ ಆ ಪ್ರದೇಶದಲ್ಲಿ ಸಂಪೂರ್ಣ ಲಾಕ್ ಡೌನ್ ಜಾರಿಗೆ  ತರಲಾಗುವುದು  ಉಳಿದೆಡೆ ವಾರದ ಆರು ದಿನ ವ್ಯಾಪಾರ ಮಳಿಗೆ ತೆರೆಯಬಹುದು.
ಆದರೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ. ಹಬ್ಬದ ದಿನಗಳಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು ಕೋವಿಡ್  ಮಾನದಂಡ ಪಾಲಿಸಬೇಕು.
  ವ್ಯಾಪಾರ  ಮಳಿಗೆಗೆ  ಮೊದಲ ಡೋಸ್ ವ್ಯಾಕ್ಸಿನ್ ಅಥವಾ ಕೋವಿಡ್ ನೆಗಟಿವ್  ಸರ್ಟಿಫಿಕೆಟ್ ಹೊಂದಿದವರು. ಒಂದು ತಿಂಗಳ ಹಿಂದೆ ಕೋವಿಡ್ ನಿಂದ ಗುಣಮುಖರಾದ ಗ್ರಾಹಕರು ತೆರಳುವುದು ಹೆಚ್ಚು ಉತ್ತಮ. 60 ವರ್ಷ ದಾಟಿದ ಎಲ್ಲರಿಗೂ ಲಭ್ಯತೆಯಂತೆ ವ್ಯಾಕ್ಸಿನ್ ನೀಡಲಾಗುವುದು. ಹಾಸಿಗೆ ಹಿಡಿದ ರೋಗಿಗಳ ಮನೆಗಳಿಗೆ ತಲುಪಿ ಲಸಿಕೆ ನೀಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News