ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತ ಮಾಹಿತಿ ಶಿಬಿರ ಉದ್ಘಾಟನೆ

Update: 2021-08-04 09:31 GMT

ಮಂಗಳೂರು, ಆ.4: ಕೃಷಿ ಮೂಲ ಸೌಕರ್ಯ ನಿಧಿ ಹಾಗೂ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಅಭಿವೃದ್ಧಿ ಯೋಜನೆಯ ಮೂಲಕ ಗ್ರಾಮಮಟ್ಟಕ್ಕೆ ಆತ್ಮನಿರ್ಭರ ಭಾರತ ಪರಿಕಲ್ಪನೆಯನ್ನು ಪರಿಚಯಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಎಸ್‌ಸಿಡಿಸಿಸಿ ಬ್ಯಾಂಕ್, ನಬಾರ್ಡ್, ಲೀಡ್‌ ಬ್ಯಾಂಕ್ ಮತ್ತು ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಸಿಇಒಗಳಿಗೆ ಆಯೋಜಿಸಲಾದ ಕೇಂದ್ರ ಪುರಸ್ಕೃತ ಯೋಜನೆಗಳಾದ ಕೃಷಿ ಮೂಲ ಸೌಕರ್ಯ ನಿಧಿ ಹಾಗೂ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆ ಅಭಿವೃದ್ಧಿ ಯೋಜನೆಯಡಿ ಹಣಕಾಸು ಸೌಲಭ್ಯಗಳ ಎರಡನೇ ದಿನದ ಮಾಹಿತಿ ಶಿಬಿರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿ ಪತ್ರವನ್ನೂ ಬಿಡುಗಡೆಗೊಳಿಸಿದ ಅವರು, ಈ ಯೋಜನೆಯ ಮೂಲಕ ಗ್ರಾಮಾಂತರ ಭಾಗದಲ್ಲಿ ಸ್ವಾವಲಂಬಿ ಜೀವನಕ್ಕೆ ಒತ್ತು ಕೊಟ್ಟಂತಾಗುತ್ತದೆ. ಕಿರು ಆಹಾರ ಉದ್ದಿಮೆಗಳಿಗೆ ಆಧುನಿಕ ತಂತ್ರಜ್ಞಾನಗಳ ಅಳವಡಿಕೆಗೂ ಇದು ಸಹಕಾರಿಯಾಗಲಿದೆ ಎಂದರು.

ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಮಾತನಾಡಿ, ಕೇಂದ್ರ-ರಾಜ್ಯ ಸರಕಾರದ ವಿವಿಧ ಕಾರ್ಯಕ್ರಮದ ಅನುಷ್ಠಾನ ಮತ್ತು ಪ್ರಗತಿಯಲ್ಲಿ ದ.ಕ. ಜಿಲ್ಲೆಯು ಕ್ರಮವಾಗಿ ರಾಜ್ಯದಲ್ಲಿ ಪ್ರಥಮ, ದ್ವಿತೀಯ ಸ್ಥಾನದಲ್ಲಿದೆ. ಈ ನಿಟ್ಟಿನಲ್ಲಿ ವಾಣಿಜ್ಯ ಬ್ಯಾಂಕ್‌ಗಳ ಜತೆ ಎಸ್‌ಸಿಡಿಸಿಸಿ ಬ್ಯಾಂಕ್‌ಗಳ ಕೊಡುಗೆಯೂ ಮಹತ್ತರವಾದುದು. ತೋಟಗಾರಿಕಾ ಬೆಳೆಗಳ ಬೆಳೆ ವಿಮೆ ಯೋಜನೆಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು 99,700 ಮಂದಿ ರೈತರು ಜಿಲ್ಲೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದು, ಇದರಲ್ಲಿ 85 ಸಾವಿರ ಮಂದಿ ಎಸ್‌ಸಿಡಿಸಿಸಿ ಬ್ಯಾಂಕ್‌ನ ಗ್ರಾಹಕರಾಗಿದ್ದಾರೆ ಎಂದರು.

ಕೃಷಿಗೆ ಸಂಬಂಧಿಸಿದ ಯೋಜನೆಗಳ ಪ್ರಗತಿಯಲ್ಲಿ ಶೇ.90ರಷ್ಟು ಪಾಲು ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಸೇರುತ್ತದೆ. ಪ್ರಸಕ್ತ ಹೊಸ ಯೋಜನೆ ಜಾರಿಗೆ ಬಂದು 8 ತಿಂಗಳು ಕಳೆದಿದೆ. ಆದರೆ ಜಿಲ್ಲೆಯಲ್ಲಿ ಪ್ರಗತಿ ಕಾಣದ ಹಿನ್ನೆಲೆಯಲ್ಲಿ, ಸಹಕಾರಿ ಸಂಘಗಳ ಮೂಲಕ ಪ್ರಚುರಪಡಿಸಲು ಉದ್ದೇಶಿಸಲಾಗಿದೆ ಎಂದು ಪ್ರವೀಣ್ ತಿಳಿಸಿದರು.

ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ನಬಾರ್ಡ್ ಡಿಡಿಎಂ ಸಂಗೀತಾ ಕರ್ತಾ, ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಎಚ್.ಆರ್.ನಾಯಕ್, ಸಹಕಾರಿ ಸಂಘಗಳ ಉಪ ನಿಬಂಧಕ ಪ್ರವೀಣ್ ಬಿ. ನಾಯಕ್, ನಿರ್ದೇಶಕ ಡಾ.ಬೆಳಪು ದೇವಿಪ್ರಸಾಸ್ ಶೆಟ್ಟಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಸಿಇಒ ರವಿಚಂದ್ರ ಬಿ. ಉಪಸ್ಥಿತರಿದ್ದರು.

ಬ್ಯಾಂಕ್‌ನ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್ ಸ್ವಾಗತಿಸಿದರು. ಬ್ಯಾಂಕ್‌ನ ಮಹಾಪ್ರಬಂಧಕ ಗೋಪಿನಾಥ ಭಟ್ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಶಶಿಕುಮಾರ್ ರೈ ವಂದಿಸಿದರು.


ಬೆಳೆ ಸಾಲ ಯೋಜನೆ ನಿಯಮಾವಳಿಯಲ್ಲಿರುವ ‘ಕುಟುಂಬ’ ಎನ್ನುವ ಪದವನ್ನು ‘ವ್ಯಕ್ತಿ’ ಎಂದು ಬದಲಾಯಿಸಲು ಸಹಕಾರಿ ಸಚಿವರಾಗಿದ್ದ ಸೋಮಶೇಖರ್‌ರಿಗೆ ಮನವಿ ಸಲ್ಲಿಸಲಾಗಿತ್ತು. ಸರಕಾರ ಅದನ್ನು ಪರಿಗಣಿಸಿ ಆದೇಶ ಹೊರಡಿಸಿದೆ. ಕೊರೋನ 3ನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಡಿಸೆಂಬರ್‌ನೊಳಗೆ ವರ್ಚುವಲ್ ಮಹಾಸಭೆ ನಡೆಸಲು ಅವಕಾಶ ನೀಡುವಂತೆ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.

-ಡಾ.ಎಂ.ಎನ್.ರಾಜೇಂದ್ರ ಕುಮಾರ್

ಅಧ್ಯಕ್ಷರು, ಎಸ್‌ಸಿಡಿಸಿಸಿ ಬ್ಯಾಂಕ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News