×
Ad

ಸೆ.15ರವರೆಗೆ ಮಲ್ಪೆ ಬೀಚ್‌ ನಲ್ಲಿ ಈಜಾಟ ನಿಷೇಧ

Update: 2021-08-04 17:39 IST

ಮಲ್ಪೆ, ಆ. 4: ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ಧವಾಗಿರುವುದರಿಂದ ಹಾಗೂ ಇತ್ತೀಚೆಗೆ ಕೊಡಗಿನ ವಿದ್ಯಾರ್ಥಿನಿಯೊರ್ವಳು ಸಮುದ್ರ ಪಾಲಾಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಬುಧವಾರ ಮಲ್ಪೆ ಬೀಚ್ ಸುತ್ತ ಸುರಕ್ಷತಾ ಕ್ರಮವಾಗಿ ತಡೆಬೇಲಿ ನಿರ್ಮಿಸಲಾಗಿದೆ.

ಎಚ್ಚರಿಕೆ ಮಧ್ಯೆಯೂ ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರರಾಜ್ಯಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮಲ್ಪೆ ಬೀಚ್‌ಗೆ ಆಗಮಿಸಿ ಸಮುದ್ರದ ನೀರಿನಲ್ಲಿ ಆಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿಯುವುದನ್ನು ತಡೆಯುವ ಉದ್ದೇಶದಿಂದ ಮಲ್ಪೆ ಬೀಚ್ ಅಭಿವೃದ್ಧಿ ಪ್ರಾಧಿಕಾರ ಈ ಕ್ರಮವನ್ನು ತೆಗೆದುಕೊಂಡಿದೆ.

ಕಿ.ಮೀ. ಉದ್ದಕ್ಕೆ ಬಲೆ

ಮಲ್ಪೆ ಬೀಚ್‌ನಲ್ಲಿ ಕಂಬಗಳನ್ನು ನೆಟ್ಟು ಸುಮಾರು ಒಂದು ಕಿಲೋಮೀಟರ್ ಉದ್ದ ಹಾಗೂ 5-6 ಅಡಿ ಎತ್ತರದಲ್ಲಿ ಬಲೆಯನ್ನು ಎಳೆಯಲಾಗಿದೆ. ಸಮುದ್ರದ ಅಪಾಯಕಾರಿ ಸ್ಥಿತಿಯನ್ನು ತಿಳಿಸುವ ನಿಟ್ಟಿನಲ್ಲಿ ತೀರದಲ್ಲಿ ಕೆಂಪು ಧ್ವಜಗಳನ್ನು ಆಳವಡಿಸಲಾಗಿದೆ. ಮಲ್ಪೆ ಪೊಲೀಸರು ಬೀಚ್‌ನಲ್ಲಿ ಬ್ಯಾರಿಕೇಡ್‌ಗಳನ್ನು ಇಟ್ಟು ಕೆಂಪು ಪಟ್ಟಿಯನ್ನು ಹಾಕಿದ್ದಾರೆ. ಅದೇ ರೀತಿ ಎಚ್ಚರಿಕೆಯ ಬ್ಯಾನರ್ ಹಾಕಲಾಗಿದ್ದು, ಅದರಲ್ಲಿ ನೋ ಎಂಟ್ರಿ ಎಂದು ಬರೆದು ಸಮುದ್ರಕ್ಕೆ ಪ್ರವೇಶಿಸದಂತೆ ಪ್ರವಾಸಿಗರನ್ನು ಎಚ್ಚರಿಸಲಾಗಿದೆ. ಈ ಮೂಲಕ ದೂರದಲ್ಲೇ ನಿಂತು ಸಮುದ್ರವನ್ನು ವೀಕ್ಷಿಸುವಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ.

ಸಮುದ್ರಕ್ಕೆ ಇಳಿದರೆ ದಂಡ

ಪ್ರವಾಸಿಗರು ಬೀಚ್‌ನಲ್ಲಿ ಹಾಕಲಾಗಿರುವ ಬಲೆಯನ್ನು ಮುರಿದು ಸಮುದ್ರಕ್ಕೆ ಇಳಿದರೆ 500 ರೂ. ದಂಡ ವಿಧಿಸಲಾಗುವುದು ಎಂದು ಬ್ಯಾನರ್ ಹಾಕಿ ಎಚ್ಚರಿಕೆ ನೀಡಲಾಗಿದೆ.

ಸಾರ್ವಜನಿಕ ವಿಳಾಸ ವ್ಯವಸ್ಥೆಗಳ ಮೂಲಕ ಕೂಡ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ಧ ವಾಗಿರುವುದರಿಂದ ಕಡಲ ತೀರದಲ್ಲಿರುವ ಲೈಫ್ ಗಾರ್ಡ್ ಕೂಡ ಸಮುದ್ರಕ್ಕೆ ಇಳಿಯಲು ಸಾಧ್ಯವಾಗುವುದಿಲ್ಲ. ಆದುದರಿಂದ ಯಾವುದೇ ಪ್ರವಾಸಿಗರು ಸಮುದ್ರ ತೀರದಲ್ಲಿ ಅಳವಡಿಸಿರುವ ಬಲೆಯನ್ನು ದಾಟಿ ಮುಂದಕ್ಕೆ ಹೋಗಬಾರದು ಎಂದು ಮಲ್ಪೆ ಬೀಚ್ ಗುತ್ತಿಗೆದಾರ ಸುದೇಶ್ ಶೆಟ್ಟಿ ತಿಳಿಸಿದ್ದಾರೆ.

''ಸೆಪ್ಟೆಂಬರ್ ತಿಂಗಳ 15ರವರೆಗೆ ಸಮುದ್ರದಲ್ಲಿ ಈಜಾಡುವುದನ್ನು ನಿಷೇಧಿಸಲಾಗಿದೆ. ಆಗಸ್ಟ್ ಕೊನೆ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಸಮುದ್ರದ ಸ್ಥಿತಿಯನ್ನು ಅವಲಂಬಿಸಿ ಕೆಂಪು ಧ್ವಜಗಳನ್ನು ತೆಗೆಯಲಾಗುತ್ತದೆ. ಕೆಂಪು ಬಾವುಟ ಗಳನ್ನು ತೆಗೆದು ಹಳದಿ ಧ್ವಜಗಳನ್ನು ಆಳವಡಿಸುವವರೆಗೆ ಪ್ರವಾಸಿಗರು ಸಮುದ್ರಕ್ಕೆ ಇಳಿಯಬಾರದು. ಹಳದಿ ಧ್ವಜಗಳು ಸಮುದ್ರಕ್ಕೆ ಇಳಿಯುವುದು ಸುರಕ್ಷಿತವೆಂದು ಸೂಚಿಸುತ್ತವೆ. ಆದುದರಿಂದ ಪ್ರವಾಸಿಗರು ನಿಯಮಗಳನ್ನು ಅನುಸರಿಸಬೇಕು''.

-ಸುದೇಶ್ ಶೆಟ್ಟಿ, ಗುತ್ತಿಗೆದಾರರು, ಮಲ್ಪೆ ಬೀಚ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News