ಆ.5-6ರಂದು ಎಚ್‌ಐವಿ ತಡೆಗಟ್ಟಲು ಮನೆ-ಮನೆ ಜಾಗೃತಿ ಆಂದೋಲನ
ಮಂಗಳೂರು, ಆ.4: ದ.ಕ.ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ವತಿಯಿಂದ ಎಚ್‌ಐವಿ ಕುರಿತು ಮನೆ ಮನೆ ಜಾಗೃತಿ ಆಂದೋಲನ ಆ.5 ಮತ್ತು 6ರಂದು ಬೆಳ್ತಂಗಡಿ ತಾಲೂಕಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಎಚ್‌ಐವಿ ನಿಯಂತ್ರಣ ಅಧಿಕಾರಿ ಡಾ.ಬದ್ರುದ್ದೀನ್ ಹೇಳಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳ್ತಂಗಡಿ ತಾಲೂಕಿನ 14 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 246 ಆಶಾ ಕಾರ್ಯಕರ್ತೆಯರು ಮನೆ ಮನೆ ಸಂಪರ್ಕಿಸಲಿದ್ದಾರೆ. ತಾಲೂಕಿನಲ್ಲಿ 2,66,589 ಜನಸಂಖ್ಯೆಯಿದ್ದು, 60,693 ಮನೆಗಳಿಗೆ ಭೇಟಿ ನೀಡಿ 12 ವರ್ಷಕ್ಕಿಂತ ಮೇಲ್ಪಟ್ಟ ಮನೆಯ ಸದಸ್ಯರಿಗೆ ಕರಪತ್ರ ನೀಡಿ ಎಚ್‌ಐವಿ ಕುರಿತು ಜಾಗೃತಿ ಮೂಡಿಸಲಿದ್ದಾರೆ ಎಂದರು. ಮನೆ ಮನೆ ಜಾಗೃತಿ ಆಂದೋಲನದ ಮೇಲ್ವಿಚಾರಣೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ತಾಲೂಕು ಮತ್ತು ಜಿಲ್ಲಾ ಮಟ್ಠದ ಅಧಿಕಾರಿಗಳಿಂದ ನಡೆಸಲಾಗುವುದು. ಎಲ್ಲಾ ಹಂತದಲ್ಲೂ ವರದಿಯನ್ನು ಸಂಗ್ರಹಿಸಿ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುವುದು. ಆಟೋಗಳಲ್ಲಿ ತೆರಳಿ ಧ್ವನಿವರ್ಧಕದ ಮೂಲಕ ಮತ್ತು ಜಾನಪದ ಕಲಾತಂಡಗಳ ಮೂಲಕ ಅರಿವು ಕಾರ್ಯಕ್ರಮ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಮಹೇಶ್ ಮತ್ತು ದತ್ತಾತ್ರೇಯ ಉಪಸ್ಥಿತರಿದ್ದರು.