×
Ad

ಯುಜಿ, ಪಿಜಿ ಪರೀಕ್ಷೆ ನಡೆಸಲು ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ

Update: 2021-08-04 19:54 IST

ಮಂಗಳೂರು, ಆ.4: ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ಪರಿಗಣಿಸಿ ಕೋವಿಡ್ ನಿಯಮ ಪಾಲನೆಯೊಂದಿಗೆ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನು ನಡೆಸಲು ವಿಶ್ವವಿದ್ಯಾನಿಲಯ ಮುಂದಾಗಬೇಕು ಎಂದು ಒತ್ತಾಯಿಸಿ ಎಬಿವಿಪಿ ನಗರ ಘಟಕದ ನೇತೃತ್ವದಲ್ಲಿ ಇಂದು ವಿದ್ಯಾರ್ಥಿಗಳು ಪ್ರತಿಭಟಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿ ಸಭೆಯು ಇಂದು ಕೊಣಾಜೆಯ ಮಂಗಳೂರು ವಿವಿಯ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ನಡೆಯುತ್ತಿದ್ದ ಸಂದರ್ಭ ವಿದ್ಯಾರ್ಥಿಗಳು ಹೊರ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಆಗಸ್ಟ್ ಎರಡರಿಂದ ಮಂಗಳೂರು ವಿವಿಯ ಪರೀಕ್ಷೆಗಳು ಆರಂಭವಾಗಿತ್ತು. ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸುವ ಕುರಿತು ವಿವಿ ಸುತ್ತೋಲೆ ಹೊರಡಿಸಿತ್ತು. ಆದರೆ ಈಗ ಕೋವಿಡ್ ಪರೀಕ್ಷೆ ಕಾರಣ ನೀಡಿ ಪರೀಕ್ಷೆ ರದ್ದುಗೊಳಿಸಿರುವುದು ಸಮಂಜವಲ್ಲ. ಮಂಗಳೂರು ವಿವಿಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಮಂಗಳೂರಿನವರೇ ಆಗಿದ್ದು, ಕಡಿಮೆ ಸಂಖ್ಯೆಯಲ್ಲಿ ಕೇರಳದಿಂದ ವಿದ್ಯಾರ್ಥಿಗಳಿಂದ ಕಲಿಯುತ್ತಿದ್ದಾರೆ. ಆದ್ದರಿಂದ ಪರೀಕ್ಷೆಗಳನ್ನು ರದ್ದುಗೊಳಿಸುವುದು ಸರಿಯಲ್ಲ. ಈಗಾಗೇ ಎಸೆಸೆಲ್ಸಿ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದಾರೆ. ಮುಂದಿನ ಸೆಮಿಸ್ಟರ್ ತರಗತಿಗಳು ಆರಂಭವಾಗಿತ್ತು. ಆದರೆ ಸೆಮಿಸ್ಟರ್ ಪರೀಕ್ಷೆಗಳೇ ಮುಗಿದಿಲ್ಲ. ಹಾಗಾಗಿ ಪರೀಕ್ಷೆ ನಡೆಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಶೈಕ್ಷಣಿಕ ಮಂಡಳಿ ಸಭೆಯ ಬಳಿಕ ಹೊರ ಬಂದ ಮಂಗೂರು ವಿವಿ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯರಿಗೆ ಸಲ್ಲಿಸಿದರು.

ಈ ಸಂದರ್ಭ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಪ್ರೊ. ಯಡಪಡಿತ್ತಾಯ, ಈಗಾಗಲೇ ಪರೀಕ್ಷೆ ನಡೆಸುವ ಕುರಿತಂತೆ ಶೈಕ್ಷಣಿಕ ಮಂಡಳಿ ಸಭೆಯಲ್ಲೂ ಚರ್ಚೆ ನಡೆದಿದ್ದು, ಉಪ ಕುಲಸಚಿವರು ಇಂದು ಸಂಜೆಯ ವೇಳೆಗೆ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವರಿಕೆ ಮಾಡಲಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಯವರು ತಮ್ಮ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಆದರೆ, ಕೋವಿಡ್ ನಿಯಮ ಪಾಲಿಸಿ ಕೊಂಡು ಕೇರಳದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆಯೊಂದಿಗೆ ಪರೀಕ್ಷೆ ನಡೆಸಲು ವಿಶ್ವವಿದ್ಯಾನಿಲಯ ಸಿದ್ಧತೆ ನಡೆಸಿದೆ ಎಂದರು. ಕುಲಸಚಿವರಾದ ಪ್ರೊ.ಪಿ.ಎಲ್. ಧರ್ಮ, ಪ್ರೊ. ಕಿಶೋರ್ ಕುಮಾರ್, ಪ್ರೊ. ನಾರಾಯಣ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News