ನೂತನ ವಿದ್ಯುತ್ ಮಸೂದೆಯಲ್ಲಿ ಇರುವ ತಪ್ಪು ಏನು?: ಬೆಳಕು ಚೆಲ್ಲಿದ ಕಿಸಾನ್ ಸಂಸತ್ತು

Update: 2021-08-04 14:37 GMT

ಹೊಸದಿಲ್ಲಿ,ಆ.4: ರೈತರು ವಿರೋಧಿಸುತ್ತಿರುವ ಕೇಂದ್ರ ಸರಕಾರದ ಮೂರು ನೂತನ ಕೃಷಿ ಕಾಯ್ದೆಗಳಲ್ಲಿ ಒಂದಾಗಿರುವ ವಿದ್ಯುತ್ ಮಸೂದೆ 2020ರ ಕುರಿತು ಹೆಚ್ಚಿನವರಿಗೆ ತಿಳಿದಿಲ್ಲ. ಈ ಮಸೂದೆ ಎಲ್ಲಿ ತಪ್ಪಿದೆ ಎನ್ನುವದರ ಬಗ್ಗೆ ದಿಲ್ಲಿಯ ಜಂತರ್ ಮಂತರ್ನಲ್ಲಿ ರೈತರು ಹಮ್ಮಿಕೊಂಡಿರುವ ಕಿಸಾನ್ ಸಂಸತ್ತು ಬೆಳಕು ಚೆಲ್ಲಿದೆ.

ಕಿಸಾನ್ ಸಂಸತ್ತಿನಲ್ಲಿ ಸೋಮವಾರ ವಿದ್ಯುತ್ ಮಸೂದೆಯ ಬಗ್ಗೆ ನಡೆದ ಚರ್ಚೆಯು ಖಾಸಗೀಕರಣ,ಭೂಕಬಳಿಕೆ ಮತ್ತು ಸರಕಾರದಿಂದ ಸುಳ್ಳು ಭರವಸೆಗಳ ಕರಾಳಕಥೆಗಳನ್ನೂ ಬಹಿರಂಗಗೊಳಿಸಿವೆ. ದೇಶಾದ್ಯಂತದಿಂದ ಆಗಮಿಸಿದ್ದ ರೈತರು ಕಿಸಾನ್ ಸಂಸತ್ ನಲ್ಲಿ ಪಾಲ್ಗೊಂಡಿದ್ದು, ಹೆಚ್ಚಿನವರು ಕರ್ನಾಟಕ ಮತ್ತು ಪೂರ್ವ ಉತ್ತರ ಪ್ರದೇಶದವರಾಗಿದ್ದರು.

ಸರಕಾರವು ನಮ್ಮ ಭೂಮಿಗಳನ್ನು ಕಿತ್ತುಕೊಂಡು ಕಾರ್ಪೊರೇಟ್ ಸಂಸ್ಥೆಗಳಿಗೆ ಒಪ್ಪಿಸಲು ಬಯಸಿದೆ. ದಾದ್ರಿ ಮತ್ತು ಅಲಹಾಬಾದ್ ನ ಮೇಜಾ ಮತ್ತು ಕರ್ಚಾನಾಗಳಲ್ಲಿ ಇದು ಸಂಭವಿಸಿದೆ. ಕರ್ಚಾನಾ ಮಾದರಿಯನ್ನು ಇಡೀ ದೇಶಕ್ಕೆ ವಿಸ್ತರಿಸಲು ಅವರು ಬಯಸಿದ್ದಾರೆ ಎಂದು ಬಲ್ಲಿಯಾದ ದಲಿತ ಸಂಘಟಕ ಮತ್ತು ಕರ್ಚಾನಾ ವಿದ್ಯುತ್ ಸ್ಥಾವರ ಭೂಸ್ವಾಧೀನ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರಾಘವೇಂದ್ರ ಕುಮಾರ ನೋವಿನಿಂದ ಹೇಳಿದರು. ರಾಘವೇಂದ್ರ ವಿರೋಧಿಸಿದ್ದ ಅಲಹಾಬಾದ್ ನ ಇವೆರಡೂ ಯೋಜನೆಗಳು ಈಗ ನಿರ್ಮಾಣ ಹಂತದಲ್ಲಿವೆ.

ಹಣಬಲ, ಅಧಿಕಾರ ಮತ್ತು ಇತರ ಎಲ್ಲವೂ...ಹೀಗೆ ಪ್ರತಿಯೊಂದನ್ನೂ ಕಾರ್ಪೊರೇಟ್ ಗಳಿಗೆ ನೆರವಾಗಲು ರಾಜಕೀಯ ಪಕ್ಷಗಳು ಬಳಸುತ್ತಿವೆ ಎಂದು ರಾಘವೇಂದ್ರ ಹೇಳಿದರು.

ಸೋನೆಪತ್ನ ರೈತರಿಗೆ ಎಂಟು ಗಂಟೆಗಳ ವಿದ್ಯುತ್ತೂ ದೊರೆಯುತ್ತಿಲ್ಲ,ನಮಗೆ ಅಗತ್ಯವಿದ್ದಾಗಲಂತೂ ವಿದ್ಯುತ್ ಪೂರೈಕೆಯಾಗಿರುವ ದಾಖಲೆಯೇ ಇಲ್ಲ. ನಾವು ಹಣವನ್ನು ಪಾವತಿಸಲು ಸಿದ್ಧರಿದ್ದೇವೆ, ಆದರೆ ನಮಗೆ ವಿದ್ಯುತ್ ಪೂರೈಕೆಯ ಖಾತರಿ ಬೇಕು. ನಮಗೆ ಸಬ್ಸಿಡಿ ಬೇಡ,ಆದರೆ ಕಾರ್ಪೊರೇಟ್ಗಳಿಗೆ 45,000 ಕೋ.ರೂ.ಗಳ ಸಾಲಗಳನ್ನೂ ಮನ್ನಾ ಮಾಡಬಾರದು ಎಂದು ನಿವೃತ್ತ ಯೋಧ ಸಂದೀಪ ದಹಿಯಾ ಹೇಳಿದರು. ರೈತರ ಗೃಹಬಳಕೆ ವಿದ್ಯುತ್ ಸಂಪರ್ಕಗಳನ್ನು ವಾಣಿಜ್ಯ ಬಳಕೆ ಸಂಪರ್ಕಗಳಾಗಿ ಮರು ವರ್ಗೀಕರಣವು ಚರ್ಚೆಯ ಕೇಂದ್ರಬಿಂದುವಾಗಿತ್ತು.

ಮಸೂದೆಯು ನಮ್ಮ ಮೇಲೆ ವಾಣಿಜ್ಯ ಬಳಕೆ ಸಂಪರ್ಕವನ್ನು ಹೇರುತ್ತದೆ. ಇದು ರೈತ ವಿರೋಧಿಯಾಗಿದೆ ಎಂದು ಹೋಷಿಯಾರಪುರದ ರೈತ ಓಂಕಾರ ಸಿಂಗ್ ಹೇಳಿದರು.
ನಮ್ಮದಿನ್ನೂ ಸಮಾಜವಾದಿ ಮತ್ತು ಅಭ್ಯುದಯಪರ ದೇಶವಾಗಿದೆ. ಹೀಗಿರುವಾಗ ಮೋದಿಯವರೇಕೆ ನಮ್ಮ ಕೃಷಿಯನ್ನು ನಾಶ ಮಾಡಲು ಬಯಸಿದ್ದಾರೆ? ವಿದ್ಯುತ್ ಶುಲ್ಕ ಹೆಚ್ಚಾದರೆ ಆಹಾರದ ವೆಚ್ಚವೂ ಹೆಚ್ಚುತ್ತದೆ. ನಮ್ಮ ಅಲ್ಪಾದಾಯ ದುಪ್ಪಟ್ಟಾಗುವುದಿಲ್ಲ,ಇನ್ನಷ್ಟು ಕುಸಿಯುತ್ತದೆ ಎಂದು ಪಂಬಾಬಿನ ಹಿರಿಯ ರೈತ ಓಂ ಸಿಂಗ್ ಹೇಳಿದರು.

ಭಾಕ್ರಾ-ನಂಗಲ್ ಅಣೆಕಟ್ಟು ನಿರ್ಮಾಣಗೊಂಡಾಗ ಯಾರ ಭೂಮಿ ಮುಳುಗಿತ್ತು? ಈಗಲೂ ಅಣೆಕಟ್ಟಿನಿಂದ ನೀರು ಬಿಟ್ಟಾಗ ಯಾರ ಬೆಳೆಗಳು ಮುಳುಗುತ್ತಿವೆ? ದಿಲ್ಲಿಯ ಮಾಲ್ ಗಳು ಮತ್ತು ಕಾರ್ಪೊರೇಟ್ ಗಳಿಗೆ ವಿದ್ಯುತ್ತಿಗಾಗಿ ಇದೆಲ್ಲವನ್ನೂ ಮಾಡಲಾಗುತ್ತಿದೆ ಮತ್ತು ರೈತರನ್ನು ಮರೆಯಲಾಗಿದೆ ಎಂದು ಪಂಜಾಬಿನ ಇನ್ನೋರ್ವ ರೈತ ಸೋಹನ ಸಿಂಗ್ ಕಿಡಿಕಾರಿದರು. ನೂತನ ವಿದ್ಯುತ್ ಮಸೂದೆಯು ಮೋದಿ ಸ್ನೇಹಿತರಿಗೆ ಪವರ್ ಗ್ರಿಡ್ಗಳು ಮತ್ತು ಸಾರ್ವಜನಿಕ ಸೌಲಭ್ಯಗಳ ಮಾರಾಟವನ್ನು ತ್ವರಿತಗೊಳಿಸುತ್ತದೆ. ಜೋಧಪುರ ಮತ್ತು ಜೈಪುರದ ನೂರಾರು ಜನರು ಈಗಲೂ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ. ಹೈವೋಲ್ಟೇಜ್ ವಿದ್ಯುತ್ ಮಾರ್ಗಕ್ಕಾಗಿ ನಮ್ಮ ಜಮೀನುಗಳನ್ನು ಕಿತ್ತುಕೊಳ್ಳಲಾಗಿತ್ತು ಎಂದು ರಾಜಸ್ಥಾನದ ರೈತ ಭಗೀರಥ ಮಲ್ ಹೇಳಿದರು. ಸ್ಮಾರ್ಟ್ ಪ್ರಿಪೇಡ್ ಮೀಟರ್ಗಳ ವಿಷಯವನ್ನೂ ಎತ್ತಿದ ರೈತರು ತಮಗೆ ವಿದ್ಯುತ್ ಲಭ್ಯತೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನೂ ಬೆಟ್ಟು ಮಾಡಿದರು.

ವಿದ್ಯುತ್ ಮಸೂದೆ ಜನ ಮತ್ತು ರೈತ ವಿರೋಧಿಯಾಗಿದೆ ಎಂದು ಈ ಹಿಂದೆ ರೈತನಾಯಕರೊಂದಿಗೆ ಮಾತುಕತೆ ಸಂದರ್ಭ ಒಪ್ಪಿಕೊಂಡಿದ್ದ ಮತ್ತು ಅದನ್ನು ಹಿಂದೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದ ಮೋದಿ ಸರಕಾರವು ಈಗ ಹಾಗೆ ಮಾಡಲು ಹಿಂದೇಟು ಹೊಡೆಯುತ್ತಿದೆ. ಇದು ಈ ಸರಕಾರದ ಇಬ್ಬಂದಿತನವನ್ನು ತೋರಿಸುತ್ತಿದೆ ಎಂದು ವಾರಣಾಸಿಯ ಹಿಮಾಂಶು ತಿವಾರಿ ಕಿಡಿಕಾರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News