×
Ad

ಆ.6ರಂದು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ 31ನೇ ಪದವಿ ಪ್ರದಾನ ಸಮಾರಂಭ

Update: 2021-08-04 19:56 IST

ಮಂಗಳೂರು, ಆ.4: ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯವು ಆ.6ರಂದು ಹೋಮಿಯೋಪಥಿ ಪದವಿ ಹಾಗೂ ಹೋಮಿಯೋಪಥಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ 31ನೇ ಪದವಿ ಪ್ರದಾನ ಸಮಾರಂಭವನ್ನು ದೇರಳಕಟ್ಟೆಯ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದೆ ಎಂದು ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪದವಿ ಪ್ರದಾನ ಸಮಾರಂಭದಲ್ಲಿ 100 ಹೋಮಿಯೋಪಥಿ ಪದವಿ ಹಾಗೂ 27 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪದವಿಯನ್ನು ಸ್ವೀಕರಿಸಲಿರುವರು. 2020 ರ ಸಾಲಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಡೆಸಿದ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಅವರಲ್ಲಿ ಹೋಮಿಯೋಪಥಿ ಪದವಿಯ ಶೈಕ್ಷಣಿಕ ವರ್ಷ 2015-16 ರ 7 ರ್ಯಾಂಕ್ ವಿಜೇತ ವಿದ್ಯಾರ್ಥಿಗಳು ಮತುತಿ ಸ್ನಾತಕೋತ್ತರ ಪದವಿಯ ಶೈಕ್ಷಣಿಕ ವರ್ಷ 2017-18ರ 14 ರ್ಯಾಂಕ್ ವಿಜೇತ ವಿದ್ಯಾರ್ಥಿಗಳು ಸೇರಿರುವರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಘೋಷಿಸಿದ ಚಿನ್ನದ ಪದಕವನ್ನು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಸ್ನಾತಕೋತತಿರ ಪದವಿಯ ವಿದ್ಯಾರ್ಥಿ ಗಳಿಸಿದ್ದು, ಅವರನ್ನೂ ಈ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.

ಫಾದರ್ ಮುಲ್ಲರ್ ಸೇವಾ ಸಂಸ್ಥೆಯು ನೀಡುವ ಅಧ್ಯಕ್ಷೀಯ ಚಿನ್ನದ ಪದಕವನ್ನು ಅಂದು ಘೋಷಿಸಲಿದ್ದು ಕಳೆದ 5 ವರ್ಷಗಳ ವಿದ್ಯಾರ್ಥಿ ಜೀವನ ದಲ್ಲಿ ಶಿಕ್ಷಕೀಯ ಮತ್ತು ಶಿಕ್ಷಕೇತರ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪದವಿ ವಿದ್ಯಾರ್ಥಿಗೆ ದೊರಕಲಿದೆ. ಅದೇ ರೀತಿ ಹೋಮಿಯೋಪಥಿ ಸ್ನಾತಕೋತ್ತರ ವಿಭಾಗದಲ್ಲಿ 3 ವರ್ಷಗಳ ವಿದ್ಯಾರ್ಥಿ ಜೀವನದಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಯನ್ನು ಗುರುತಿಸಿ ವಿಶೇಷ ಬಹುಮಾನ ದೊಂದಿಗೆ ಸನ್ಮಾನಿಸಲಾಗುವುದು. ವಿಶೇಷ ಸಾಧನೆಗಳಿಸಿದ 25 ವಿದ್ಯಾರ್ಥಿಗಳನ್ನು ಈ ಸಮಾರಂಭದಲ್ಲಿ ಸನ್ಮಾನಿಸಲಾಗುವುದು ಎಂದು ಅವರು ಹೇಳಿದರು.

ಕಾರ್ಯಕ್ರಮವು ಮದ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದ್ದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷರಾದ ಅ.ವಂ. ಆ. ಪೀಟರ್ ಪೌಲ್ ಸಲ್ಡಾನ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಲಿರುವರು ಹಾಗೂ ಕರ್ನಾಟಕ ಸರಕಾರ ಆಯುಷ್ ಇಲಾಖೆಯ ಸಹ ನಿರ್ದೇಶಕರಾದ ಡಾ. ಎಚ್. ಜಿ. ಮಂಜುನಾಥ್‌ರವರು  ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಲಿರುವರು ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾ ವಿದ್ಯಾಲಯ ಆಸ್ಪತ್ರೆಯಲ್ಲಿ ದೈನಂದಿನ ಹೊರರೋಗಿ ಹಾಗೂ ಒಳರೋಗಿ ವಿಭಾಗವನ್ನು ಹೊರತುಪಡಿಸಿ ಹೋಮಿಯೋಪಥಿ ಸ್ಪೆಶಾಲಿಟಿ ಕ್ಲಿನಿಕ್ ಶುಭಾರಂಭಗೊಳ್ಳಲಿದ್ದು, ನುರಿತ ವೈದ್ಯರಿಂದ ಸೇವೆ ಲಭ್ಯವಿರುವುದು. ಈ ಸ್ಪೆಶಾಲಿಟಿ ಕ್ಲಿನಿಕನ್ನು ಆ.6 ರಂದು ಬೆಳಗ್ಗೆ 9 ಗಂಟೆಗೆ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಉದ್ಘಾಟಿಸಲಿರುವರು.

ಸ್ಪೆಶಾಲಿಟಿ ಕ್ಲಿನಿಕ್ ವಾರದ 6 ದಿನ ಲಭ್ಯವಿದ್ದು, ಮಾಹಿತಿಗಾಗಿ 0824- 2203901ನ್ನು ಸಂಪರ್ಕಿಸಬಹುದು.
ಗೋಷ್ಠಿಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ವಂ. ರೋಶನ್ ಕ್ರಾಸ್ತಾ, ಉಪ ಆಡಳಿತಾಧಿಕಾರಿ ವಂ. ರೋಹನ್ ಡಾಯಸ್, ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್, ಉಪ ಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿಸೋಜಾ, ಅಧೀಕ್ಷಕರಾದ ಡಾ. ಗಿರೀಶ್ ನಾವಡ ಯು.ಕೆ., ಪದವಿ ಕಾರ್ಯಕ್ರಮ ಸಂಯೋಜಕರಾದ ಡಾ. ರಂಜನ್ ಸಿ. ಬ್ರಿಟ್ಟೋ, ಮಾಧ್ಯಮ ಸಮಿತಿಯ ಸಂಯೋಜಕರಾದ ಡಾ. ಶರ್ಲಿನ್ ಪೌಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News