ರೈಲ್ವೆ ಬೇಡಿಕೆಗಳ ಈಡೇರಿಕೆಗೆ ರೈಲ್ವೆ ಸಚಿವರಿಗೆ ನಳಿನ್ ಕುಮಾರ್ ಮನವಿ

Update: 2021-08-04 14:33 GMT

ಮಂಗಳೂರು, ಆ.4: ದ.ಕ. ಜಿಲ್ಲಾ ವ್ಯಾಪ್ತಿಯ ರೈಲ್ವೆ ಇಲಾಖೆಗೆ ಸಂಬಂಧಿಸಿದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಶ್ಣವ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಮಂಗಳೂರು-ತೋಕೂರು ರೈಲ್ವೆ ಲೈನ್‌ನ್ನು ಸೌತ್ ವೆಸ್ಟರ್ನ್ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಬೇಕು. ಹಾಸನ-ಮಂಗಳೂರು ರೈಲ್ವೆ ಅಭಿವೃದ್ಧಿ ಕಂಪೆನಿಯನ್ನು ಸೌತ್ ವೆಸ್ಟರ್ನ್ ರೈಲ್ವೆಯೊಂದಿಗೆ ವಿಲೀನ ಮಾಡಬೇಕು ಎಂದು ಹೇಳಿದರು.

ಮಂಗಳೂರು ಕೇಂದ್ರ ರೈಲು ನಿಲ್ದಾಣಕ್ಕೆ ಅಂತರರಾಷ್ಟ್ರೀಯ ಗುಣಮಟ್ಟದ ಹೊಸ ಕಟ್ಟಡ ನಿರ್ಮಿಸುವಂತೆ ಹಾಗೂ ಫ್ಲಾಟ್ ಫಾರ್ಮ್ 4 ಮತ್ತು 5ರ ಕಾಮಗಾರಿಯನ್ನು ಚುರುಕುಗೊಳಿಸುವುದು, ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಆಧುನಿಕ ಸೌಲಭ್ಯಗಳ ಅಳವಡಿಕೆ ಹಾಗೂ ರೈಲ್ವೆ ನಿಲ್ದಾಣದ ಮೂಲಭೂತ ಸೌಲಭ್ಯಗಳ ಮೇಲ್ದರ್ಜೆಗೇರಿಸುವುದು ಎಂದು ಸಂಸದರು ತಿಳಿಸಿದರು.

ಪುತ್ತೂರು ವಿವೇಕಾನಂದ ಕಾಲೇಜು ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ, ಕಬಕ ಪುತ್ತೂರು ಸ್ಟೇಷನ್ ಯಾರ್ಡ್‌ನಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಾಣ, ಮಂಗಳೂರು ಬೈಕಂಪಾಡಿಯ ಮೀನಕಳಿಯ ರೈಲ್ವೆ ಯಾರ್ಡ್‌ನಲ್ಲಿ ಪಾದಚಾರಿಗಳ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು ಒತ್ತಾಯಿಸಿದರು.

ಹೊಸ ರೈಲುಗಳಿಗೆ ಬೇಡಿಕೆ: ಮಂಗಳೂರಿನಿಂದ ತಿರುಪತಿಗೆ ಹಾಸನ ಮೂಲಕ ಹೊಸ ರೈಲ್ವೆ ಸೇವೆ, ಮಂಗಳೂರಿನಿಂದ ಚೆನ್ನೈಗೆ ಹಾಸನ ಮೂಲಕ ಹೊಸ ರೈಲ್ವೆ ಸೇವೆ, ಗೇಜ್ ಪರಿವರ್ತನೆಗೆ ಮೊದಲು ಸಂಚರಿಸುತ್ತಿದ್ದ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ ರೈಲ್‌ನ್ನು ಮಂಗಳೂರು ಕೇಂದ್ರ ರೈಲು ನಿಲ್ದಾಣದಿಂದ ಮೀರಜ್‌ಗೆ ಮರು ಪ್ರಾರಂಭಿಸುವ ಬಗ್ಗೆ ಕೇಂದ್ರ ಸಚಿವರಲ್ಲಿ ಸಂಸದರು ಒತ್ತಾಯಿಸಿದರು.

ಸಂಸದರ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು, ಬೇಡಿಕೆಗಳ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಶೀಘ್ರದಲ್ಲಿ ಈಡೇರಿ ಸುವ ಭರವಸೆ ನೀಡಿದ್ದಾರೆ ಎಂದು ಸಂಸದರ ಆಪ್ತ ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News