ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ತಿದ್ದುಪಡಿ ಮಸೂದೆಗೆ ರಾಜ್ಯಸಭೆಯ ಅಂಗೀಕಾರ

Update: 2021-08-04 15:12 GMT

ಹೊಸದಿಲ್ಲಿ,ಆ.4: ಪೆಗಾಸಸ್ ಬೇಹುಗಾರಿಕೆ ವಿವಾದ ಮತ್ತು ಇತರ ವಿಷಯಗಳ ಕುರಿತು ಪ್ರತಿಪಕ್ಷಗಳ ಕೋಲಾಹಲದ ನಡುವೆಯೇ ಬುಧವಾರ ರಾಜ್ಯಸಭೆಯು ಸೀಮಿತ ಹೊಣೆಗಾರಿಕೆ ಪಾಲುದಾರಿಕೆ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿತು. ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಮತ್ತು ಉದ್ಯಮ ಸುಗಮತೆಯನ್ನು ಹೆಚ್ಚಿಸಲು ಈ ಮಸೂದೆಯು ಉದ್ದೇಶಿಸಿದೆ.

ಸಂಕ್ಷಿಪ್ತ ಚರ್ಚೆಯ ಬಳಿಕ ಅಂಗೀಕರಿಸಲಾದ ಮಸೂದೆಯು 2008ರ ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಕಾಯ್ದೆಗೆ ತಿದ್ದುಪಡಿಯ ಮೂಲಕ ಕಾನೂನಿನಡಿ 12 ತಪ್ಪುಗಳನ್ನು ನಿರಪರಾಧೀಕರಿಸುತ್ತದೆ ಮತ್ತು ಉದ್ಯಮ ನಿರ್ವಹಣೆಯನ್ನು ಹೆಚ್ಚು ಸುಲಭವಾಗಿಸಲು ನೆರವಾಗುತ್ತದೆ.

ಕಳೆದ ವಾರ ಸದನದಲ್ಲಿ ಮಂಡಿಸಲಾಗಿದ್ದ ಮಸೂದೆಯನ್ನು ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಲ್ಲಿಸಿದರು.
ರಾಮನಾಥ ಠಾಕೂರ್,ಕೆ.ರವೀಂದ್ರ ಕುಮಾರ,ಎಂ.ತಂಬಿದುರೈ ಮತ್ತು ಸುಜೀತಕುಮಾರ ಸೇರಿದಂತೆ ಕೆಲವು ಸಂಸದರು ಮಸೂದೆಯ ಕುರಿತು ಮಾತನಾಡಿದರೆ ಹಲವಾರು ಪ್ರತಿಪಕ್ಷ ಸದಸ್ಯರು ಸದನದ ಬಾವಿಯಲ್ಲಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು.
ಕೋಲಾಹಲದ ನಡುವೆಯೇ ಸೀತಾರಾಮನ್ ಅವರು ಸಂಕ್ಷಿಪ್ತ ಉತ್ತರವನ್ನು ನೀಡಿದ ಬಳಿಕ ಧ್ವನಿಮತದಿಂದ ಮಸೂದೆಯು ಅಂಗೀಕಾರಗೊಂಡಿತು.

ಮಸೂದೆಯ ಕುರಿತು ಮಾತನಾಡಲು ಆಹ್ವಾನಿಸಲಾದ ಕೆಲವು ಪ್ರತಿಪಕ್ಷ ಸದಸ್ಯರು ತಮ್ಮ ವಿಷಯಗಳನ್ನು ಪ್ರಸ್ತಾಪಿಸಲು ಪ್ರಯತ್ನಿಸಿದರಾದರೂ ಉಪಸಭಾಪತಿ ಹರಿವಂಶ ಅವರು ಅದಕ್ಕೆ ಅವಕಾಶ ನೀಡಲಿಲ್ಲ.
ಮಸೂದೆಯು 2013ರ ಕಂಪನಿಗಳ ಕಾಯ್ದೆಯಡಿ ‘ಸಣ್ಣ ಕಂಪನಿ’ಯ ಪರಿಕಲ್ಪನೆಗೆ ಅನುಗುಣವಾಗಿ ‘ಸಣ್ಣ ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ’ಯ ಪರಿಕಲ್ಪನೆಯನ್ನು ಜಾರಿಗೆ ತರುವುದನ್ನು ಪ್ರಸ್ತಾವಿಸಿದೆ.

ಅಪರಾಧಗಳನ್ನು ಸಿವಿಲ್ ಲೋಪಗಳನ್ನಾಗಿ ಪರಿವರ್ತಿಸಲು ಮತ್ತು ಶಿಕ್ಷೆಯ ಸ್ವರೂಪವನ್ನು ದಂಡಗಳಿಂದ ವಿತ್ತೀಯ ದಂಡಗಳಿಗೆ ಪರಿವರ್ತಿಸಲು ಕಾಯ್ದೆಯ ಕೆಲವು ಕಲಮ್ಗಳನ್ನು ಮಸೂದೆಯು ತಿದ್ದುಪಡಿಗೊಳಿಸುತ್ತದೆ.

ಪಸ್ತುತ ಕಾಯ್ದೆಯು 24 ದಂಡವಿಧಿಗಳು,21 ರಾಜಿಯಲ್ಲಿ ಇತ್ಯರ್ಥಗೊಳಿಸಬಹುದಾದ ಅಪರಾಧಗಳು ಮತ್ತು ಮೂರು ರಾಜಿ ಇತ್ಯರ್ಥಕ್ಕೊಳಪಡದ ಗಂಭೀರ ಅಪರಾಧಗಳನ್ನು ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News