ನನ್ನ ಪರವಾಗಿ ಪ್ರತಿಭಟನೆ ಬೇಡ: ಹಾಲಾಡಿ ಶ್ರೀನಿವಾಸ ಶೆಟ್ಟಿ

Update: 2021-08-04 15:55 GMT

ಉಡುಪಿ, ಆ.4: ಕುಂದಾಪುರವನ್ನು ಐದು ಬಾರಿ ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದರೂ, ಬಸವರಾಜ ಬೊಮ್ಮಾಯಿ ಅವರ ಇಂದಿನ ನೂತನ ರಾಜ್ಯ ಸಚಿವ ಸಂಪುಟಕ್ಕೆ ತಮ್ಮನ್ನು ಪರಿಗಣಿಸದಿರುವ ಬಗ್ಗೆ ಅಸಮಧಾನಗೊಂಡಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಈ ಬಗ್ಗೆ ಮಾದ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ನೀಡದಿರುವ ಬಗ್ಗೆ ನನ್ನ ಪರವಾಗಿ ಪ್ರತಿಭಟನೆ ಮಾಡಿದರೆ ಅದರಿಂದ ನಾನು ಸಂತೋಷ ಪಡುವುದಿಲ್ಲ ಎಂದು ತನ್ನ ಅಭಿಮಾನಿಗಳಿಗೆ ತಿಳಿ ಹೇಳಿದ್ದಾರೆ.

ಸರಕಾರ ದುರಾಡಳಿತ ಮಾಡಿದಾಗ ಮಾತ್ರ ಪ್ರತಿಭಟನೆ ಮಾಡಬೇಕು. ಮಂತ್ರಿ ಸ್ಥಾನಕ್ಕಾಗಿ ಪ್ರತಿಭಟಿಸುವುದು ಗೌರವದ ಲಕ್ಷಣವಲ್ಲ. ನನ್ನ ಪರವಾಗಿ ಪ್ರತಿಭಟಿಸಿದರೆ ನಾನು ಸಂತೋಷಪಡುವುದಿಲ್ಲ. ಪ್ರತಿಭಟನೆ ಏನಿದ್ದರೂ ಅದನ್ನು ಮತದಲ್ಲಿ ತೋರಿಸಬೇಕು ಎಂದರು.

ನನ್ನದು ಏನಿದ್ದರೂ ಮೌನವ್ರತ. ಆಸೆಯೇ ದು:ಖಕ್ಕೆ ಮೂಲ ಎಂದು ಬುದ್ಧ ಹೇಳಿದ್ದಾನೆ. ನಾನು ಬರುವಾಗ ಏನೂ ತಂದಿಲ್ಲ. ಹೋಗುವಾಗಲೂ ಬರಿಗೈಲಿ ಹೋಗುವವನು. ನನ್ನ ಪರವಾಗಿ ಪ್ರತಿಭಟನೆ ಮಾಡುವುದು ಧರ್ಮವಲ್ಲ. ಸಮಾಜದ ಒಳಿತಿಗಾಗಿ ಮಾತ್ರ ಪ್ರತಿಭಟನೆ ನಡೆಸಬೇಕು ಎಂದರು.

ಇಂದು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮುಂದಿನ ನಿರ್ಧಾರಗಳನ್ನು ಪರಮಾತ್ಮನೇ ಬಲ್ಲ. ಒಂದು ಬಾರಿ ನನ್ನನ್ನು ಪ್ರಮೋಶನ್‌ಗೆ ಕರೆದು ಡಿಮೋಶನ್ ಮಾಡಿದ್ರು ಎಂದವರು ಹಿಂದಿನ ಕಹಿ ಘಟನೆಯನ್ನು ನೆನಪಿಸಿಕೊಂಡು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News