ಮತ್ತೆ ಒಲಿದ ಮಂತ್ರಿ ಸ್ಥಾನ: ಕೋಟ ಶ್ರೀನಿವಾಸ ಪತ್ನಿ ಹರ್ಷ

Update: 2021-08-04 16:04 GMT

ಉಡುಪಿ, ಆ.4: ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅನಿರೀಕ್ಷಿತ ರೀತಿಯಲ್ಲಿ ಮೂರನೇ ಬಾರಿಗೆ ಮಂತ್ರಿಸ್ಥಾನ ಒಲಿದಿರುವುದು ಅವರ ಪತ್ನಿ ಶಾಂತಾ ಅವರಿಗೆ ಸಹಜವಾಗಿ ಹರ್ಷ ತಂದಿದೆ. ಹೀಗಾಗಿ ಅವರ ಕೋಟತಟ್ಟು ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಪದವಿ ಸಿಕ್ಕಿರುವ ಬಗ್ಗೆ ತನ್ನನ್ನು ಸಂಪರ್ಕಿಸಿ ಪ್ರತಿಕ್ರಿಯೆ ಕೇಳಿದ ಸುದ್ದಿಗಾರರೊಂದಿಗೆ ಮಾತ ನಾಡಿದ ಶಾಂತಾ, ಅವರು ಸಚಿವರಾಗಿರುವುದು ತುಂಬಾ ಖುಷಿ ಕೊಟ್ಟಿದೆ. ಅವರೊಬ್ಬ ಶ್ರಮಜೀವಿ. ಬೆಳಗ್ಗಿನಿಂದ ಸಂಜೆ ತನಕ ಜನರ ಜೊತೆ ಇರುತ್ತಾರೆ. ಬೆಳಗ್ಗೆ ಹೋದರೆ ಅವರು ಮನೆಗೆ ಬರೋದು ರಾತ್ರಿಯೇ. ಹೆಂಡತಿ ಮಕ್ಕಳ ಜೊತೆ ಅವರು ಇರುವುದೇ ಇಲ್ಲ. ಅವರ ಕೆಲಸವೂ ಹಾಗಿದೆ.’ ಎಂದು ತಮ್ಮ ಗಂಡನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರು.

ಇದೇ ವೇಳೆ ಕೋಟ ಅವರು ನಿರ್ಮಿಸುತ್ತಿರುವ ಮನೆಯ ಕುರಿತಂತೆ ಎದ್ದ ವಿವಾದದ ಬಗ್ಗೆ ಬೇಸರ ತೋಡಿಕೊಂಡ ಶಾಂತಾ, ಇತ್ತೀಚೆಗೆ ನಾವು ಸಾಲ ಮಾಡಿ ಒಂದು ಮನೆ ಕಟ್ಟಿಸುತ್ತಿದ್ದೇವೆ. ಈ ಮೊದಲು 13 ಸೆಂಟ್ಸ್ ಜಾಗ ಖರೀದಿ ಮಾಡಿದ್ದು, ಅದರ ಸಾಲ ಕೂಡಾ ಇದೆ. ಈಗ ಮತ್ತೆ ಸಾಲ ಮಾಡಿ ಮನೆ ಕಟ್ಟಿಸುತ್ತಿದ್ದೇವೆ. ಆದರೆ ಕೆಲವರು ಕೋಟ್ಯಂತರ ರೂ. ಮನೆ ಎಂದು ಅಪಪ್ರಚಾರ ಮಾಡಿದರು. ಇದರಿಂದ ನಮ್ಮ ಮನಸ್ಸಿಗೆ ತುಂಬಾ ನೋವಾಗಿದೆ. ನಾವು ಶ್ರೀಮಂತರಲ್ಲ. ಬಡತನದಲ್ಲೇ ಬೆಳೆದು ಬಂದವರು. ಜನರ ಸಮಸ್ಯೆ, ನೋವು ನಮಗೆ ತಿಳಿದಿದೆ. ಇಷ್ಟಿದ್ದರೂ ಕೆಲವರು ಅಪಪ್ರಚಾರ ಮಾಡಿದ್ದು ಬೇಸರವಾಗಿದೆ ಎಂದು ಶಾಂತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News