​ ಮಾಹಿತಿ ಹಕ್ಕು ಕಾರ್ಯಕರ್ತನ ವಿರುದ್ಧ ಮಾನನಷ್ಟ ಮೊಕದ್ದಮೆ: ರಹೀಂ ಉಚ್ಚಿಲ್

Update: 2021-08-04 16:57 GMT
ರಹೀಂ ಉಚ್ಚಿಲ್

ಮಂಗಳೂರು, ಆ.4: ಕಳೆದ ವರ್ಷದ ಮಾರ್ಚ್/ಎಪ್ರಿಲ್/ಮೇ ತಿಂಗಳ ಎರಡನೇ ವಾರದ ತನಕ ಕೊರೋನ ಲಾಕ್ ಡೌನ್ ಸಂದರ್ಭ ಕಚೇರಿಗೆ ತೆರಳದೆ ಮನೆಯಲ್ಲೇ ಕುಳಿತು ಮಾಸಿಕ ಭತ್ತೆ ಪಡೆದು ಭ್ರಷ್ಟಾಚಾರ ನಡೆಸಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಡಾ ಅರವಿಂದ್ ಶಾನ್‌ ಭಾಗ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಯನ್ನು ಹಂಚಿ ಕೊಂಡಿರುವುದನ್ನು ಪ್ರಶ್ನಿಸಿ ಅರವಿಂದ್ ಶಾನ್‌ಭಾಗ್ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷದ ಮಾ.21ಕ್ಕೆ ಸರಕಾರ ಲಾಕ್‌ಡೌನ್ ಆದೇಶ ಹೊರಡಿಸಿತ್ತು. ಅಲ್ಲಿಯ ತನಕ ಕಚೇರಿಯ ಕೆಲಸ ಎಂದಿನಂತೆ ನಡೆದಿತ್ತು ಎಪ್ರಿಲ್ ಹಾಗೂ ಮೇ ತಿಂಗಳ ಮಧ್ಯಭಾಗದ ತನಕ ಕಟ್ಟು ನಿಟ್ಟಿನ ಆಜ್ಞೆ ಪಾಲನೆಯಲ್ಲಿದ್ದರೂ ಕೋವಿಡ್ ನಿಯಮ ಅನುಸರಿಸಿ 140 ಅರ್ಹ ಕಲಾವಿದರಿಗೆ ಕಿಟ್ ವಿತರಣೆ, 275 ಅರ್ಹರನ್ನು ಗುರುತಿಸಿ ಅವರ ಖಾತೆಗೆ ನೇರ ಸಹಾಯಧನ ವರ್ಗಾವಣೆ, ಒಂದು ಸ್ಥಾಯಿ ಸಮಿತಿ ಸಭೆ, ನೂತನ ಬ್ಯಾರಿ ಲಿಪಿ ಸಂಶೋಧನಾ ಸಮಿತಿ ಸಭೆ ಸಹಿತ ಹಲವು ಚಟುವಟಿಕೆ ನಡೆಸಲಾಗಿದೆ. ಅಕಾಡಮಿಯ ಸಿಬ್ಬಂದಿ ವರ್ಗವನ್ನು ಕರೆತರುವ, ಕಿಟ್ ವಿತರಣೆ ಮಾಡುವ ಕೆಲಸ ಸಹಿತ ಹಲವು ಸಮಾಜಮುಖಿ ಕೆಲಸ ಕಾರ್ಯವು ಈ ಅವಧಿಯಲ್ಲಿ ನಡೆದಿದೆ. ಅದರಂತೆ ನಿಯಮಾನುಸಾರ ಮಾಸಿಕ ಭತ್ತೆ ಪಡೆದುಕೊಂಡಿದ್ದೇನೆ. ಈ ಕುರಿತು ಎಲ್ಲಾ ದಾಖಲೆಯೂ ಇದೆ. ಹೀಗಿದ್ದರೂ ಸತ್ಯವನ್ನು ಮರೆಮಾಚಿ ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿ ನನ್ನ ತೇಜೋವಧೆಗೆ ಪ್ರಯತ್ನ ನಡೆಸಿದ ಮಾಹಿತಿ ಹಕ್ಕು ಕಾರ್ಯಕರ್ತನ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡುವುದು ಅನಿವಾರ್ಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭ ಸರಕಾರದ ಸವಲತ್ತನ್ನು ಎಲ್ಲಾ ಅಕಾಡಮಿ, ನಿಗಮ, ಮಂಡಳಿ, ಪ್ರಾಧಿಕಾರ, ಜನಪ್ರತಿನಿಧಿಗಳು ಸೇರಿದಂತೆ ಬಹತೇಕ ಎಲ್ಲರೂ ಪಡೆದಿರುವಾಗ ನಮ್ಮ ಬಗ್ಗೆ ಮಾತ್ರ ಬೊಟ್ಟು ಮಾಡಿ ಬ್ರಹ್ಮಾಂಡ ಭ್ರಷ್ಟಾಚಾರ/ಸರಕಾರದ ಹಣ ಗುಳುಂ ಇತ್ಯಾದಿ ಬರಹ ಪ್ರಕಟವಾಗುವಂತೆ ಮಾಧ್ಯಮಗಳಿಗೆ ಹಾಗೂ ಸಾಮಾಜಿಕ ಜಾಲತಾಣಕ್ಕೆ ಸುಳ್ಳು ಮಾಹಿತಿ ನೀಡಿದ್ದು ಸರಿಯಲ್ಲ. ಈ ಕುರಿತು ಸ್ವತ: ತನ್ನ ವಿರುದ್ಧ ತನಿಖೆ ನಡೆಸಬೇಕೆಂದು ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದೇನೆ. ಈ ಕುರಿತು ಆರೋಪ ಸಾಬೀತಾದಲ್ಲಿ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಅಲ್ಲದೆ ಕಳೆದ ಬಾರಿ ಕೊರೋನ ಸೋಂಕಿನಿಂದ ಆಸ್ಪತ್ರೆಯ ಐಸಿಯು ಸೇರಿ ಆರು ಲಕ್ಷ ರೂ. ಬಿಲ್ಲು ಪಾವತಿಸಲು ಮನೆಯವರ ಚಿನ್ನ ಅಡವಿಟ್ಟಿದ್ದೇನೆ. ಅದನ್ನು ಇನ್ನೂ ಬಿಡಿಸಿಲ್ಲ ಎಂದು ರಹೀಂ ಉಚ್ಚಿಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News