ಗಡಿ ವಿವಾದ ಅಂತ್ಯಗೊಳಿಸಲು ಮಾತುಕತೆಗೆ ಅಸ್ಸಾಂ ಮತ್ತು ಮಿಝೋರಾಂ ಸಜ್ಜು

Update: 2021-08-04 17:23 GMT
Photo: Google map

 ಐಜ್ವಾಲ್ ,ಆ.4: ಉಭಯ ರಾಜ್ಯಗಳ ನಡುವಿನ ಗಡಿ ವಿವಾದವನ್ನು ಅಂತ್ಯಗೊಳಿಸಲು ಅಸ್ಸಾಂ ಮತ್ತು ಮಿಜೋರಾಮ್ ಸಚಿವರು ಗುರುವಾರ ಇಲ್ಲಿ ಮಾತುಕತೆಗಳನ್ನು ನಡೆಸಲಿದ್ದಾರೆ.

ಮಿಝೋರಾಂನ ಗೃಹಸಚಿವ ಲಾಲ್ಚಾಮ್ಲಿಯಾನಾ, ಭೂ ಕಂದಾಯ ಸಚಿವ ಲಾಲ್ರೌತಕಿಮಾ ಹಾಗೂ ಗೃಹ ಇಲಾಖೆಯ ಕಾರ್ಯದರ್ಶಿ ವಾನ್ಲಾಂಗೈಸಕಾ ಅವರು ಆಸ್ಸಾಮಿನ ಸಚಿವರಾದ ಅತುಲ್ ಬೋರಾ ಮತ್ತು ಅಶೋಕ ಸಿಂಘಾಲ್ ಅವರನ್ನೊಳಗೊಂಡ ನಿಯೋಗದ ಜೊತೆಗೆ ಮಾತುಕತೆಗಳನ್ನು ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಉಭಯ ರಾಜ್ಯಗಳ ನಡುವಿನ ಗಡಿವಿವಾದ ಜು.26ರಂದು ತೀವ್ರ ಸಂಘರ್ಷದ ರೂಪವನ್ನು ಪಡೆದುಕೊಂಡಿದ್ದು,ಆರು ಅಸ್ಸಾಂ ಪೊಲೀಸರು ಮತ್ತು ಓರ್ವ ನಾಗರಿಕ ಸಾವನ್ನಪ್ಪಿದ್ದರು ಹಾಗೂ 50ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

ಉಭಯ ರಾಜ್ಯಗಳು ಗಡಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಈ ಮಾತುಕತೆಗಳು ಖಂಡಿತವಾಗಿ ನೆರವಾಗಲಿವೆ ಎಂದು ಮಿಜೋರಾಮ್ ಮುಖ್ಯಮಂತ್ರಿ ರೆರಾಮ್ತಂಗಾ ಅವರು ಟ್ವೀಟಿಸಿದ್ದಾರೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಮಧ್ಯಪ್ರವೇಶದ ಬಳಿಕ ಉದ್ವಿಗ್ನತೆಯನ್ನು ಶಮನಿಸಲು ಮಾತುಕತೆಗೆ ಉಭಯ ರಾಜ್ಯಗಳು ನಿರ್ಧರಿಸಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ನಡುವೆ ಅಸ್ಸಾಂ ಸರಕಾರದ ಬೆಂಬಲವಿದೆ ಎನ್ನಲಾಗಿರುವ ಕಾಚಾರ್ ಜಿಲ್ಲೆಯ ರಾ.ಹೆದ್ದಾರಿ 306ರಲ್ಲಿಯ ‘ಅನಧಿಕೃತ ’ಆರ್ಥಿಕ ನಿರ್ಬಂಧವು ಬುಧವಾರ 10ನೇ ದಿನವನ್ನು ಪ್ರವೇಶಿಸಿದೆ. ಜು.26ರಿಂದ ಯಾವುದೇ ವಾಹನವು ಅಸ್ಸಾಮಿನಿಂದ ಮಿಜೋರಾಮ್ ಪ್ರವೇಶಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News