ಇರಾನ್ ನಲ್ಲಿ ಸಿಲುಕಿಕೊಂಡಿದ್ದ ಭಟ್ಕಳದ ಯುವಕ ತಾಯ್ನಡಿಗೆ

Update: 2021-08-04 17:17 GMT

ಭಟ್ಕಳ, ಆ. 4: ಇರಾನ್‌ಗೆ ಉದ್ಯೋಗಕ್ಕೆ ತೆರಳಿ ಅಲ್ಲಿನ ನೌಕೆಯೊಂದರಲ್ಲಿ ಕಳೆದ 20 ತಿಂಗಳುಗಳಿಂದ ಸಿಲುಕಿಕೊಂಡಿದ್ದ ಭಟ್ಕಳ ಅಝಾದ್ ನಗರದ ಯುವಕ ಯಾಸೀನ್ ಶಾಹ ಮಕಾನ್ದಾರ್(31) ಬುಧವಾರ ಬೆಂಗಳೂರು ತಲುಪಿದ್ದು, ಗುರುವಾರ ಭಟ್ಕಳ ತಲುಪಲಿದ್ದಾರೆ.

ಬೆಂಗಳೂರು ತಲುಪಿದ ಬಳಿಕ ಪತ್ರಿಕೆಯೊಂದಿಗೆ ಮಾತನಾಡಿದ ಯಾಸೀನ್ ಶಾಹ ಮಕಾನ್ದಾರ್, ನನ್ನನ್ನು ಕಷ್ಟದಿಂದ ಪಾರುಮಾಡಿದ ಏಮ್ ಇಂಡಿಯಾ ಫೋರಂನ ಶಿರಾಲಿ ಮುಝಫ್ಫರ್ ಶೇಕ್ ಹಾಗೂ ಭಟ್ಕಳದ ಯೂಸೂಫ್ ಬರ್ಮಾವರ್, ಸರಫ್ರಾಝ್ ಶೇಕ್, ಅಫ್ಝಲ್ ಎಸ್.ಎಂ. ಹಾಗೂ ನ್ಯಾಯವಾದಿ ಯಾಸಿರ್ ಅರಫಾತ್ ಮಕಾನ್ದಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ವಿಸಾ ಏಜೆಂಟರ ಮೂಲಕ ಇರಾನ್ ನೌಕೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದೆ. ಆದರೆ, ಕಳೆದ 20 ತಿಂಗಳುಗಳಿಂದ ಹಡಗಿನಲ್ಲಿ ಸಿಲುಕಿಕೊಂಡಿದ್ದು ವೇತನವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು. ಈ ಸಂದರ್ಭ ಭಾರತಕ್ಕೆ ಮರಳುವ ಕುರಿತು ಯೋಚಿಸಿದ್ದೆ. ಆದರೆ, ಯಾರ ಸಂಪರ್ಕವೂ ಇಲ್ಲದಿದ್ದ ಕಾರಣ ಏನೂ ಮಾಡಲಾದ ಸ್ಥಿತಿಯಲ್ಲಿದ್ದೆ ಎಂದರು.

ಬಳಿಕ ಏಮ್ಸ್ ಇಂಡಿಯಾ ಫೋರಂನ ಶಿರಾಲಿ ಮುಝಪ್ಪರ್ ಶೇಕ್ ಮತ್ತು ಅವರ ತಂಡ ನನ್ನನ್ನು ಸಂಪರ್ಕಿಸಿ ಪ್ರತಿ ಹೆಜ್ಜೆಗೂ ಮಾರ್ಗದರ್ಶನ ನೀಡಿತು. ಅವರ ಮಾರ್ಗದರ್ಶನದಂತೆ ಇದೀಗ ನನ್ನ ತಾಯ್ನೆಡಿಗೆ ತಲುಪಿದ್ದೇನೆ. ಅಲ್ಲದೆ, ತಂಡದ ಪ್ರಯತ್ನದ ಫಲವಾಗಿ ನನಗೆ ಬರಬೇಕಾಗಿದ್ದ 3,800 ಡಾಲರ್ ವೇತನದಲ್ಲಿ 2,000 ಡಾಲರ್ ವೇತನ ದೊರೆತಿದೆ. ಇದಕ್ಕಾಗಿ ಅವರಿಗೆ ನಾನು ಋಣಿಯಾಗಿದ್ದೇನೆ ಎಂದು ಹೇಳಿದರು.

ಇರಾನ್‌ನಿಂದ ಬೆಂಗಳೂರಿಗೆ ಬಂದ ನನಗೆ ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯ ಜೊತೆಗೆ ಭಟ್ಕಳಕ್ಕೆ ತೆರಳಲು ಬಸ್ ಟಿಕೆಟ್, ಊಟ, ತಿಂಡಿಯ ವ್ಯವಸ್ಥೆಯನ್ನೂ ಏಮ್ ಇಂಡಿಯಾ ಫೋರಂ ಮಾಡಿದೆ ಎಂದು ಭಾವುಕರಾದ ಯಾಸೀನ್ ಶಾಹ, ಏಮ್ ಇಂಡಿಯಾ ಫೋರಂಗೆ ಕೃತಜ್ಞತೆ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News