ಐಸಿಸ್ ಪರ ಪ್ರಚಾರ ಆರೋಪ :ಎನ್‌ಐಎಯಿಂದ ನಾಲ್ವರ ಸೆರೆ

Update: 2021-08-04 17:25 GMT

ಹೊಸದಿಲ್ಲಿ, ಆ.4: ಐಸಿಸ್ ಪರ ಪ್ರಚಾರ ನಡೆಸಿದ ಆರೋಪದಲ್ಲಿ ಬುಧವಾರ ಬೆಂಗಳೂರು, ಮಂಗಳೂರು ಹಾಗೂ ಜಮ್ಮು-ಕಾಶ್ಮೀರದ ಮೂರು ಸ್ಥಳಗಳಲ್ಲಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ದಾಳಿಗಳನ್ನು ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ನಾಲ್ವರನ್ನು ಬಂಧಿಸಿದೆ.

ಐಸಿಸ್‌ನ ಸಿದ್ಧಾಂತದ ಪ್ರಚಾರಕ್ಕಾಗಿ ಮತ್ತು ಐಸಿಸ್ ಘಟಕಕ್ಕೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳಲು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಐಸಿಸ್ ಪ್ರಚಾರ ಚಾನಲ್‌ಗಳನ್ನು ನಡೆಸುತ್ತಿದ್ದರೆನ್ನಲಾದ ಕೇರಳ ನಿವಾಸಿ ಮುಹಮ್ಮದ್ ಅಮೀನ್, ಡಾ. ರಹೀಸ್ ರಶೀದ್ ಮತ್ತು ಮುಸಾಹಬ್ ಅನ್ವರ್ ಎನ್ನುವವರನ್ನು ಮಾರ್ಚ್‌ನಲ್ಲಿ ಬಂಧಿಸಿತ್ತು. ಅಮೀನ್ ಮತ್ತು ಸಂಗಡಿಗರು ಜಿಹಾದ್ ಸೇರುವಂತೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸಲು ಅಮಾಯಕ ಮಸ್ಲಿಂ ಯುವಕರನ್ನು ಪ್ರಚೋದಿಸುತ್ತಿದ್ದರು ಹಾಗೂ ತಮ್ಮ ಜಾಲವನ್ನು ಕಾಶ್ಮೀರ, ಭಾಗಶಃ ಕೇರಳ ಮತ್ತು ಕರ್ನಾಟಕದಲ್ಲಿ ವಿಸ್ತರಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಎನ್‌ಐಎ ತಿಳಿಸಿದೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಅಮೀನ್ ಮತ್ತು ಆತನ ಸಹಚರರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದ ಶಂಕಿತರ ಮನೆಗಳ ಮೇಲೆ ಬುಧವಾರ ದಾಳಿಗಳನ್ನು ನಡೆಸಲಾಗಿದ್ದು, ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು ,ಹಾರ್ಡ್‌ ಡಿಸ್ಕ್ ಡ್ರೈವ್‌ಗಳು, ಪೆನ್ ಡ್ರೈವ್‌ಗಳು, ಸಿಮ್ ಕಾರ್ಡ್‌ಗಳು ಸೇರಿದಂತೆ ಹಲವಾರು ಡಿಜಿಟಲ್ ಸಾಧನಗಳನ್ನು ಮತ್ತು ಆಕ್ಷೇಪಾರ್ಹ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ತಿಳಿಸಿದೆ.

ಶ್ರೀನಗರದ ಉಬೈದ್ ಹಮೀದ್, ಕಾಶ್ಮೀರ ಬಂಡಿಪೋರ ನಿವಾಸಿ ಮುಝಮ್ಮಿಲ್ ಹಸನ್ ಭಟ್, ಮಂಗಳೂರು ಉಳ್ಳಾಲ ನಿವಾಸಿ ಅಮ್ಮಾರ್ ಮತ್ತು ಬೆಂಗಳೂರಿನ ಶಂಕರ ವೆಂಕಟೇಶ ಪೆರುಮಾಳ ಅಲಿಯಾಸ್ ಅಲಿ ಮುವಾವಿಯ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪ್ರಕಟನೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News