ಸುದೀರ್ಘ ಕೋವಿಡ್ ಸಮಸ್ಯೆ ತೀವ್ರ ಆತಂಕಕಾರಿ: ವಿಶ್ವ ಆರೋಗ್ಯ ಸಂಸ್ಥೆ

Update: 2021-08-05 16:13 GMT

ವಿಶ್ವಸಂಸ್ಥೆ, ಆ.5: ದೀರ್ಘಾವಧಿಯ ಕೋವಿಡ್ ಸಮಸ್ಯೆ ತೀವ್ರ ಆತಂಕಕಾರಿಯಾಗಿದೆ ಎಂದಿರುವ ವಿಶ್ವ ಆರೋಗ್ಯ ಸಂಸ್ಥೆ, ಕೊರೋನ ರೋಗದ ನಂತರದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ತಕ್ಷಣ ವೈದ್ಯಕೀಯ ನೆರವು ಪಡೆಯುವಂತೆ ಸಲಹೆ ನೀಡಿದೆ.

  ಕೊರೋನ ನಂತರದ ಆರೋಗ್ಯ ಸಮಸ್ಯೆ ನಾಲ್ಕು ಅಥವಾ ಹೆಚ್ಚು ವಾರ ಮುಂದುವರಿದರೆ ಅದು ದೀರ್ಘ ಕೊರೋನದ ಲಕ್ಷಣವಾಗಿದೆ ಎಂದು ಅಮೆರಿಕದ ರೋಗನಿಯಂತ್ರಣ ಮತ್ತು ಪ್ರತಿಬಂಧ ಕೇಂದ್ರ ಹೇಳಿದೆ.

 ದೀರ್ಘ ಕೊರೋನ ಸಮಸ್ಯೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಆತಂಕಿತವಾಗಿದೆ, ಯಾಕೆಂದರೆ ಇದು ವಾಸ್ತವಿಕ ಸಮಸ್ಯೆಯಾಗಿದೆ. ಇದರ ಪರಿಣಾಮ ಎಷ್ಟು ಸಮಯದವರೆಗೆ ಇರುತ್ತದೆ ಎಂಬುದು ತಿಳಿದಿಲ್ಲ. ಕೊರೋನೋತ್ತರದ ಲಕ್ಷಣದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಉದ್ದೇಶದಿಂದ ಸೋಂಕು ಪ್ರಕರಣದ ಅಧ್ಯಯನ ನಡೆಸಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್-19 ತಾಂತ್ರಿಕ ವಿಭಾಗದ ಮುಖ್ಯಸ್ಥೆ ಮರಿಯಾ ವಾನ್ ಕೆಖೊರೇವ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.

ದೀರ್ಘ ಕೊರೋನ ಸಮಸ್ಯೆಗೆ ಸಿಲುಕಿದ ರೋಗಿಗಳು ಚೇತರಿಸಿಕೊಳ್ಳಲು 35 ವಾರಕ್ಕೂ ಹೆಚ್ಚು ಸಮಯ ಬೇಕಾಗುತ್ತದೆ ಎಂದು ಲ್ಯಾನ್ಸೆಟ್‌ನ ಇಕ್ಲಿನಿಕಲ್ ಮೆಡಿಸಿನ್ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿ ತಿಳಿಸಿದೆ. ಸುಸ್ತು, ಬಳಲಿಕೆ, ಮೆದುಳು ನಿಷ್ಕ್ರಿಯವಾಗುವುದು, ಮಹಿಳೆಯರಲ್ಲಿ ಮುಟ್ಟಿನ(ಋತುಸ್ರಾವ)ದ ಅವಧಿಯಲ್ಲಿ ವ್ಯತ್ಯಾಸ, ಹೃದಯ ಬಡಿತ ಹೆಚ್ಚುವುದು, ಸ್ಮರಣಶಕ್ತಿ ಕಳೆದುಕೊಳ್ಳುವುದು, ದೃಷ್ಟಿ ಮಂದವಾಗುವುದು ಇತ್ಯಾದಿಗಳು ಕೊರೋನೋತ್ತರ ರೋಗದ ಲಕ್ಷಣಗಳಾಗಿವೆ . ಈ ಲಕ್ಷಣ ಕೊರೋನ ಸೋಂಕಿನ ಪ್ರಾರಂಭದ 1 ಅಥವಾ 3 (ಕೆಲವೊಮ್ಮೆ 6) ತಿಂಗಳ ಬಳಿಕ ಕಾಣಿಸಿೊಳ್ಳುತ್ತದೆ ಎಂದು ವರದಿ ಹೇಳಿದೆ.

 ಈ ಮಧ್ಯೆ, 4 ವಾರದ ಬಳಿಕ ಕೋವಿಡ್-19ರ ಲಕ್ಷಣ ಕಂಡುಬರುವ ಮಕ್ಕಳ ಪ್ರಮಾಣ ಕಡಿಮೆಯಾಗಿದೆ. ಕೋವಿಡ್ ರೋಗಲಕ್ಷಣ ಕಂಡುಬರುವ ಮಕ್ಕಳೂ 6 ದಿನದಲ್ಲಿ ಚೇತರಿಕೆ ಹೊಂದುತ್ತಾರೆ ಎಂದು ‘ಲ್ಯಾನ್ಸೆಟ್ ಚೈಲ್ಡ್ ಆ್ಯಂಡ್ ಅಡೋಲ್ಸೆಂಟ್ ಹೆಲ್ತ್ ’ನಲ್ಲಿ ಪ್ರಕಟವಾದ ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News