ಕೋವಿಡ್ ಮೂರನೇ ಅಲೆಯಿಂದ ಜಿಡಿಪಿ ಶೇ.7ಕ್ಕೆ ಕುಸಿಯುವ ಭೀತಿ: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ
ಕೊಲ್ಕತ್ತಾ, ಆ.6: ಕೋವಿಡ್-19 ಸೋಂಕಿನ ಮೂರನೇ ಅಲೆಯಿಂದಾಗಿ ದೇಶದ ಜಿಡಿಪಿ ಮತ್ತಷ್ಟು ಕುಸಿಯುವ ಸಾಧ್ಯತೆ ಇದ್ದು, ಐಎಂಎಫ್ ಇತ್ತೀಚೆಗೆ ಪರಿಷ್ಕರಿಸಿದ 9.5% ಬದಲಾಗಿ ಶೇಕಡ 7ಕ್ಕೆ ಕುಸಿಯಬಹುದು ಎಂಬ ಶಂಕೆಯನ್ನು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದ ಜಾಗತಿಕ ಸಲಹಾ ಮಂಡಳಿ(ಜಿಎಬಿ)ಯ ಮುಖ್ಯಸ್ಥರಾಗಿರುವ ಮತ್ತು ಸಾಂಕ್ರಾಮಿಕಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ರಾಜ್ಯ ಸರ್ಕಾರಕ್ಕೆ ಸಲಹೆಗಾರರಾಗಿರುವ ಬ್ಯಾನರ್ಜಿ, "ರಾಜ್ಯದ ಆರ್ಥಿಕತೆಗೆ ಉತ್ತೇಜನ ದೊರಕುವುದು ನೇರವಾಗಿ ಪ್ರಸಕ್ತ ಒತ್ತಡದಲ್ಲಿರುವ ದೇಶದ ಆರ್ಥಿಕ ಪುನಶ್ಚೇತನವನ್ನು ಅವಲಂಬಿಸಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಕೋವಿಡ್ ಪರಿಸ್ಥಿತಿಯಿಂದಾಗಿ ಆರ್ಥಿಕತೆಯ ಪ್ರಗತಿ ನಿಧಾನವಾಗಿದೆ. ಈ ಮೊದಲು ಐಎಂಎ, ದೇಶದ ಪ್ರಗತಿಯನ್ನು ಶೇಕಡ 12.5 ಎಂದು ಅಂದಾಜಿಸಿತ್ತು. ಬಳಿಕ ಅದನ್ನು 9.5 ಶೇಕಡ ಎಂದು ಪರಿಷ್ಕರಿಸಿದೆ. ನನ್ನ ಅಂದಾಜಿನ ಪ್ರಕಾರ ಇದು ಶೇಕಡ 7ಕ್ಕಿಂತಲೂ ಕಡಿಮೆಯಾಗಲಿದೆ. ಇನ್ನೊಂದು ಅಲೆ ಪ್ರಗತಿಯನ್ನು ಮತ್ತಷ್ಟು ಇಳಿಸುವ ಸಾಧ್ಯತೆ ಇದೆ. ದೇಶದ ಆರ್ಥಿಕತೆ ಸುಧಾರಿಸದಿದ್ದರೆ, ರಾಜ್ಯವೊಂದೇ ಮುನ್ನಡೆಯಲು ಸಾಧ್ಯವಾಗದು" ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ತಿಂಗಳು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ದೇಶದ ಆರ್ಥಿಕ ಪ್ರಗತಿ ದರವನ್ನು 2022ರ ಮಾರ್ಚ್ 31 ವೇಳೆಗೆ ಶೇಕಡ 9.5 ಆಗಬಹುದು ಎಂದು ಅಂದಾಜಿಸಿತ್ತು. ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆಯ ತೀವ್ರತೆ ಪುನಶ್ಚೇತನದ ವೇಗಕ್ಕೆ ಕಡಿವಾಣ ಹಾಕಿತ್ತು.