ಗಡಿ ಸಂಘರ್ಷ: ಒಪ್ಪಂದಕ್ಕೆ ಮಿಝೋರಾಂ- ಅಸ್ಸಾಂ ಸಹಿ

Update: 2021-08-06 04:04 GMT

ಗುವಾಹತಿ, ಆ.6: ಅಸ್ಸಾಂ ಮತ್ತು ಮಿಝೋರಾಂ ಗಡಿ ಪ್ರದೇಶದಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನವಾಗಿ ಉಭಯ ರಾಜ್ಯಗಳು, ವಿವಾದಿತ ಪ್ರದೇಶಗಳಿಂದ ತಮ್ಮ ಪೊಲೀಸ್ ಹಾಗೂ ಅರಣ್ಯ ರಕ್ಷಕರನ್ನು ಹಿಂಪಡೆಯುವ ಸಂಬಂಧ ಒಪ್ಪಂದ ಮಾಡಿಕೊಂಡಿವೆ. ಇದು ಹಲವು ದಶಕಗಳಷ್ಟು ಹಳೆಯದಾದ ಗಡಿ ವ್ಯಾಜ್ಯದ ಬಗೆಗಿನ ಮಾತುಕತೆ ಮುಂದುವರಿಕೆಗೆ ಅವಕಾಶ ಮಾಡಿಕೊಡಲಿದೆ.

ಕೇಂದ್ರ ಗೃಹ ಸಚಿವಾಲಯದ ನಿರ್ಧಾರದಂತೆ, ಬರಾಕ್ ಕಣಿವೆ ಜಿಲ್ಲೆಗಳಾದ ಕಚಾರ್, ಕರೀಮ್‌ಗಂಜ್ ಮತ್ತು ಹೈಲಕಂಡಿ ಹಾಗೂ ಮಿಝೋರಾಂನ ಮಮಿತ್ ಮತ್ತು ಕೊಲಸಿಬ್ ಜಿಲ್ಲೆಗಳ ವಿವಾದಿತ ಪ್ರದೇಶಗಳಲ್ಲಿ ತಟಸ್ಥ ಪಡೆಗಳು ಕಾವಲು ಕಾಯಲಿವೆ.

ಉಭಯ ದೇಶಗಳ ಸಚಿವರು ಐಜ್ವಾಲ್‌ನಲ್ಲಿ ಸಭೆ ಸೇರಿ ಈ ಒಪ್ಪಂದಕ್ಕೆ ಬಂದರು. ಜುಲೈ 26ರಂದು ಕಚಾರ್ ಜಿಲ್ಲೆಯ ಲೈಲಾಪುರದಲ್ಲಿ ನಡೆದ ಪೊಲೀಸ್ ದಾಳಿಯಲ್ಲಿ ಅಸ್ಸಾಂನ ಆರು ಮಂದಿ ಪೊಲೀಸರು ಬಲಿಯಾದ ಘಟನೆ ಬಗ್ಗೆ ಮಿಝೋರಾಂ ಅಧಿಕೃತವಾಗಿ ಸಂತಾಪ ಸೂಚಿಸಿತು. ಪೊಲೀಸರ ಹತ್ಯೆಗೆ ಪ್ರತಿಯಾಗಿ ಮಿಝೋರಾಂಗೆ ಪ್ರಯಾಣ ಮಾಡದಂತೆ ಅಸ್ಸಾಂ ತನ್ನ ಜನತೆಗೆ ನಿರ್ದೇಶನ ನೀಡಿತ್ತು.

ಇದರಿಂಧಾಗಿ ವೈದ್ಯಕೀಯ ಸಲಕರಣೆಗಳು ಮತ್ತು ಅಗತ್ಯ ವಸ್ತುಗಳನ್ನು ಹೊಂದಿದ್ದ ನೂರಾರು ಲಾರಿಗಳು ರಾಷ್ಟ್ರೀಯ ಹೆದ್ದಾರಿ 306ರಲ್ಲಿ ಅತಂತ್ರವಾಗಿ ಉಳಿದಿದ್ದವು. ಇದು ಅನಧಿಕೃತ ಆರ್ಥಿಕ ತಡೆ ಎಂದು ಮಿಝೋರಾಂ ಬಣ್ಣಿಸಿತ್ತು. ಸಭೆಯ ಬಳಿಕ ಟ್ವೀಟ್ ಮಾಡಿದ ಮಿಝೋರಾಂ ಮುಖ್ಯಮಂತ್ರಿ, "ಅಸ್ಸಾಂ ಹಾಗೂ ಮಿಝೋರಾಂ ಸರ್ಕಾರಗಳು ಐಜ್ವಾಲ್‌ನಲ್ಲಿ ಸಭೆ ನಡೆಸಿದ ಬಳಿಕ ಜಂಟಿ ಹೇಳಿಕೆಗೆ ಸಹಿ ಮಾಡಿವೆ" ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News