ಕುಸ್ತಿಪಟು ರವಿ ದಹಿಯಾಗೆ 4 ಕೋಟಿ ರೂ. ಪುರಸ್ಕಾರ ಘೋಷಿಸಿದ ಹರ್ಯಾಣ ಸರಕಾರ

Update: 2021-08-06 05:37 GMT

ಗುರ್ಗಾಂವ್: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಯಶಸ್ಸು ಸಾಧಿಸಿದ ರಾಜ್ಯದ ಕ್ರೀಡಾಪಟುಗಳಿಗೆ ಹರ್ಯಾಣ ಸರ್ಕಾರ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿದೆ. ಈ ಸಾಧನೆಗೆ ಪ್ರತಿಫಲ ಪಡೆಯುತ್ತಿರುವವರ ಪಟ್ಟಿಯಲ್ಲಿ ಕುಸ್ತಿಪಟು ರವಿ ದಹಿಯಾ ಸೇರಿದ್ದಾರೆ. ಪುರುಷರ ಫ್ರೀಸ್ಟೈಲ್ 57 ಕೆಜಿ ಫೈನಲ್‌ನಲ್ಲಿ ರಶ್ಯದ ಝಾವೂರ್ ಉಗುವ್ ವಿರುದ್ಧ 4: 7  ಅಂತರದಿಂದ ಸೋತಿರುವ ದಹಿಯಾ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.

ಹರ್ಯಾಣ ಸರಕಾರದಿಂದ ದಹಿಯಾ ಅವರಿಗೆ 4 ಕೋಟಿ ರೂ., ಸರಕಾರಿ ಉದ್ಯೋಗ ಹಾಗೂ  ರಿಯಾಯಿತಿ ದರದಲ್ಲಿ ಪ್ಲಾಟ್ ಸಿಗಲಿದೆ ಎಂದು ಹರಿಯಾಣ ಸರಕಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಒಳಾಂಗಣ ಕುಸ್ತಿ ಕ್ರೀಡಾಂಗಣವನ್ನು ದಹಿಯಾ ಗ್ರಾಮದಲ್ಲಿ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದರು.

"ನಮ್ಮ ಭೂಮಿಪುತ್ರ ರವಿ ದಹಿಯಾ ಹರ್ಯಾಣ ಮಾತ್ರವಲ್ಲ ಇಡೀ ಭಾರತದ ಹೃದಯವನ್ನು ಗೆದ್ದಿದ್ದಾರೆ ... ಬೆಳ್ಳಿ ಪದಕ ಗೆದ್ದ ಅವರಿಗೆ ಅನೇಕ ಅಭಿನಂದನೆಗಳು ಹಾಗೂ  ಶುಭಾಶಯಗಳು. ನೀವು ಯಶಸ್ಸಿನ ಹೊಸ ಎತ್ತರವನ್ನು ಸಾಧಿಸಬೇಕೆಂದು ನಾನು ಬಯಸುತ್ತೇನೆ" ಎಂದು  ಖಟ್ಟರ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News