×
Ad

ಹಿಂದುತ್ವ ಮೊದಲ ಆಯ್ಕೆ, ಸಚಿವ- ಶಾಸಕ ಸ್ಥಾನ ಆನಂತರ: ಸಚಿವ ಸುನೀಲ್ ಕುಮಾರ್

Update: 2021-08-06 14:21 IST

ಬೆಳ್ಮಣ್, ಆ.6: ಹಿಂದುತ್ವ ಮತ್ತು ಅಭಿವೃದ್ಧಿ ವಿಚಾರದಲ್ಲಿ ರಾಜಿ ಇಲ್ಲ. ಹಿಂದುತ್ವ ನನ್ನ ಮೊದಲ ಆಯ್ಕೆ. ಸಚಿವ-ಶಾಸಕ ಸ್ಥಾನ ಅನಂತರ. ಯಾವುದೇ ಹಂತದಲ್ಲೂ ಹಿಂದುತ್ವ ವಿಚಾರದಲ್ಲಿ ರಾಜಿ ಮಾಡುವುದಿಲ್ಲ ಎಂದು ರಾಜ್ಯದ ನೂತನ ಸಚಿವ ವಿ.ಸುನೀಲ್‌ ಕುಮಾರ್ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಶುಕ್ರವಾರ ಮೊದಲ ಬಾರಿ ಉಡುಪಿ ಜಿಲ್ಲೆ ಹಾಗೂ ಕಾರ್ಕಳ ಕ್ಷೇತ್ರಕ್ಕೆ ಆಗಮಿಸಿದ ಸುನಿಲ್ ಕುಮಾರ್ ಅವರು ಕ್ಷೇತ್ರದ ಗಡಿಭಾಗವಾದ ಬೆಳ್ಮಣ್‌ನಲ್ಲಿ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ ಸ್ವೀಕರಿಸಿದ ಬಳಿಕ ಮಾತನಾಡುತಿದ್ದರು.

ಸಚಿವನಾಗಿ ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸುತ್ತಿದ್ದೇನೆ. ಜಿಲ್ಲೆ ಹಾಗೂ ಕ್ಷೇತ್ರಕ್ಕೆ ಬರುತ್ತಿರುವುದು ಸಂತೋಷ ಹಾಗೂ ಭಾವನಾತ್ಮಕ ಕ್ಷಣ. ಕಾರ್ಕಳ ಕ್ಷೇತ್ರದ ಜನ ಮೂರು ಬಾರಿ ಆಯ್ಕೆ ಮಾಡಿದ್ದರಿಂದ ಸಚಿವನಾದೆ. ಈಗ ಪಕ್ಷ ದೊಡ್ಡ ಪ್ರಮಾಣದ ಹೊಣೆಗಾರಿಕೆಯನ್ನು ಹೆಗಲಿಗೇರಿಸಿದೆ ಎಂದವರು ಹೇಳಿದರು.

ಮುಖ್ಯಮಂತ್ರಿ ಮತ್ತು ಪಕ್ಷದ ಹಿರಿಯರು ನಿರೀಕ್ಷೆಯಿಟ್ಟು ಸ್ಥಾನ ಕೊಟ್ಟಿದ್ದಾರೆ. ಜವಾಬ್ದಾರಿ ನಿಭಾಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನಗೆ ಇಷ್ಟದ ಖಾತೆ ಎಂಬುದಿಲ್ಲ. ಮುಖ್ಯಮಂತ್ರಿಗಳು ಕೊಟ್ಟ ಖಾತೆಯನ್ನು ಅತ್ಯಂತ ಜವಾಬ್ದಾರಿುುತವಾಗಿ ನಿಭಾಯಿಸುತ್ತೇನೆ ಎಂದರು.

ಕಾಂಗ್ರೆಸ್ ಗೊಂದಲದ ಗೂಡು: ಶಾಸಕ ಝಮೀರ್ ಅಹಮದ್ ಮೇಲೆ ಇಡಿ ದಾಳಿಯ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಒಂದು ಆಂತರಿಕ ಗೊಂದಲದ ಗೂಡಾಗಿದೆ. ಝಮೀರ್ ಪ್ರಕರಣ ಈ ಆಂತರಿಕ ಗೊಂದಲದ ಒಂದು ಭಾಗ. ಕಾಂಗ್ರೆಸ್‌ನಲ್ಲಿ ಪರಮೇಶ್ವರ್, ಸಿದ್ದರಾಮಯ್ಯ, ಡಿಕೆಶಿ ಹೀಗೆ ಬೇರೆ ಬೇರೆ ಗುಂಪುಗಳಿವೆ. ಕಾಂಗ್ರೆಸ್‌ನ ಈ ಗುಂಪುಗಳು ಪರಸ್ಪರ ವೈರತ್ವ ಸಾಧಿಸುತ್ತಿದೆ. ಕಾಂಗ್ರೆಸ್‌ನ ಗೊಂದಲ ಆಗಾಗ ಒಂದೊಂದೇ ಬಹಿರಂಗ ಆಗುತ್ತಿದೆ ಎಂದರು.

ಹಿರಿಯ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಅಸಮಧಾನದ ಬಗ್ಗೆ ಪ್ರಶ್ನಿಸಿದಾಗ, ಹಾಲಾಡಿಯವರಿಗೆ ಪಕ್ಷ ಗೌರವ ಕೊಟ್ಟಿದೆ. ಅವರಿಗೆ ಇನ್ನಷ್ಟು ಗೌರವ ಸಿಗಬೇಕು ಎಂಬ ನಿರೀಕ್ಷೆ ಸಹಜ. ಸಚಿವನಾಗಿ ನಾನು ಮಾಡುವ ಕೆಲಸಕ್ಕೆ ಶ್ರೀನಿವಾಸ್ ಶೆಟ್ಟಿ ಅವರ ಬೆಂಬಲ ಬೇಕು. ಸಚಿವ ಶ್ರೀನಿವಾಸ ಪೂಜಾರಿ, ಅಂಗಾರ ಅವರ ಮಾರ್ಗದರ್ಶನದಲ್ಲಿ ನಾನು ನಡೆಯುತ್ತೇನೆ. ಪಕ್ಷ ಹಾಲಾಡಿ ಅವರನ್ನು ಖಂಡಿತ ಗುರುತಿಸುತ್ತದೆ, ಅವರನ್ನು ಕರೆದು ಮಾತನಾಡಿಸುತ್ತದೆ ಎಂದು ನುಡಿದರು.

ಬಿ.ವೈ.ವಿಜಯೇಂದ್ರಗೆ ಸೂಕ್ತ ಸ್ಥಾನಮಾನದ ವಿಚಾರವನ್ನು ಬಿಜೆಪಿ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದ ಸುನೀಲ್‌ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯ ಚರ್ಚೆಯ ಕುರಿತ ಪ್ರಶ್ನೆಗೆ ನಳಿನ್ ಕುಮಾರ್ ಕಟೀಲ್ ಅವರೇ ನಮ್ಮ ಅಧ್ಯಕ್ಷರು ಎಂದರು. ಬಳಿಕ ಅವರು ಕಾರ್ಯಕರ್ತರ ಹರ್ಷೋದ್ಗಾರಗಳ ನಡುವೆ ಕಾರ್ಕಳದತ್ತ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News