×
Ad

ದ.ಕ. ಜಿಲ್ಲೆಯಲ್ಲಿ 5 ಸಾವಿರ ಪ್ರಕರಣಗಳ ಇತ್ಯರ್ಥಕ್ಕೆ ಶಿಫಾರಸು: ಪೃಥ್ವಿರಾಜ್ ವರ್ಣೇಕ್

Update: 2021-08-06 14:35 IST

ಮಂಗಳೂರು, ಆ.6: ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ವರ್ಷಕ್ಕೆ 3 ಬಾರಿ ಲೋಕ ಅದಾಲತ್ ಕಾರ್ಯಕ್ರಮ ನಡೆಯುತ್ತಿದ್ದು, ಆ.14ರಂದು ರಾಜ್ಯದ ಎಲ್ಲ ನ್ಯಾಯಾಲಯದಲ್ಲೂ ಬೆಳಗ್ಗೆ 10:30ರಿಂದ 5 ಗಂಟೆಯ ವರೆಗೆ ಲೋಕ ಅದಾಲತ್ ನಡೆಯಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪೃಥ್ವಿರಾಜ್ ಜಿ. ವರ್ಣೇಕರ್ ತಿಳಿಸಿದ್ದಾರೆ.

ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಮಾತನಾಡಿದ ಅವರು, ರಾಜ್ಯ ಕಾನೂನು ಸೇವಾ ಸಮಿತಿಯ ನಿರ್ದೇಶನದ ಮೇರೆಗೆ ಈ ಅದಾಲತ್ ನಡೆಯುತ್ತಿದೆ. ಈ ಲೋಕ ಅದಾಲತ್ ರಾಜಿ ಸಂಧಾನದ ಮೂಲಕ ನ್ಯಾಯಾಲಯದಲ್ಲಿ ಬಾಕಿಯಿರುವ ಪ್ರಕರಣಗಳು ಹಾಗೂ ಪೂರ್ವ ವ್ಯಾಜ್ಯ ಪ್ರಕರಣಗಳು ವಿಚಾರಣೆಗೆ ಬರಲಿವೆ. ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ನ್ಯಾಯಾಧೀಶ ಮುರಳೀಧರ್ ಪೈ ನೇತೃತ್ವದಲ್ಲಿ ನಡೆಯಲಿದೆ. ಲೋಕ ಅದಾಲತ್‌ನಲ್ಲಿ ಯಾರಿಗೂ ಅನ್ಯಾಯವಾಗದಂತೆ ಸೌಹಾರ್ದಯುತವಾಗಿ ಬಗೆಹರಿಸಲು ಸಾಧ್ಯವಿದೆ. ಇದರಿಂದ ಹಣ, ಸಮಯದ ಉಳಿತಾಯವು ಆಗಲಿದೆ. ಲೋಕ ಅದಾಲತ್ ಜಿಲ್ಲಾದ್ಯಂತ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯದಲ್ಲಿ ನಡೆಯಲಿದ್ದು, 15 ದಿನಗಳಿಂದ ಈ ಪ್ರಕ್ರಿಯೆ ನಡೆಯುತ್ತಿದೆ. ಮೋಟಾರು ವಿಮೆ ಪ್ರಕರಣ ಸಂಬಂಧಿಸಿ ವಿಮಾ ಸಂಸ್ಥೆಯ ಮುಖ್ಯಸ್ಥರನ್ನು ಕರೆಯಿಸಿ ಇತ್ಯರ್ಥ ಮಾಡಲಾಗುವುದು. ಮುಖ್ಯ ನ್ಯಾಯಮೂರ್ತಿ ಓಕ್ ಕೂಡಾ ಇನ್ಸೂರೆನ್ಸ್ ಕಂಪೆನಿಗಳಿಗೆ ವರ್ಚುವಲ್ ಮೀಟಿಂಗ್ ಮಾಡಿ, ನಿರ್ದೇಶನ ನೀಡಿದ್ದಾರೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ಯರ್ಥಕ್ಕೆ ಒಟ್ಟು 52 ಸಾವಿರ ಪ್ರಕರಣಗಳಿದ್ದು, ಇವುಗಳಲ್ಲಿ 37,200 ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನ ಮಾಡಬಹುದಾದ ಪ್ರಕರಣವಾಗಿದೆ. ಇವುಗಳಲ್ಲಿ ಈ ಬಾರಿಯ ಅದಾಲತ್‌ಗೆ 5 ಸಾವಿರ ಪ್ರಕರಣಗಳನ್ನು ಶಿಫಾರಸು ಮಾಡಲಾಗಿದೆ. ಕಳೆದ ಬಾರಿ ಲೋಕ ಅದಾಲತ್‌ನಲ್ಲಿ 4,700 ಪ್ರಕರಣಗಳು ಇತ್ಯರ್ಥವಾಗಿದ್ದವು. ಲೋಕ ಅದಾಲತ್‌ನಲ್ಲಿ 26 ಬೆಂಚ್‌ಗಳಿದ್ದು, 26 ನ್ಯಾಯಾಧೀಶರು, 26 ವಕೀಲರು ಇರುತ್ತಾರೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News