ಹೆಜಮಾಡಿ: ಸಚಿವ ಸುನಿಲ್ ಕುಮಾರ್ ಗೆ ಸ್ವಾಗತ
ಪಡುಬಿದ್ರಿ: ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಬಂದಿರುವ ನಮಗೆಲ್ಲರಿಗೂ ಪಕ್ಷ ಮಾತೃ ಇದ್ದಂತೆ. ಹಾಗಾಗಿ ಪಕ್ಷದ ಚಟುವಟಿಕೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಉಡುಪಿ ಜಿಲ್ಲೆಗೆ ಶುಕ್ರವಾರ ಆಗಮಿಸಿದ ಅವರು ಹೆಜಮಾಡಿಯಲ್ಲಿ ಅದ್ದೂರಿ ಸ್ವಾಗತ ಸ್ವೀಕರಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಸರ್ಕಾರ ಮತ್ತು ಪಕ್ಷ ಮಹತ್ತರವಾದ ಜವಾಬ್ದಾರಿ ನೀಡಿದೆ. ಮುಖ್ಯಮಂತ್ರಿಗಳ ನಿರ್ದೇಶನದಂತೆ ತಂಡವಾಗಿ ಜಿಲ್ಲೆಯ ಎಲ್ಲಾ ಶಾಸಕರ ಸಹಕಾರ ಪಡೆದು ಅಭಿವೃದ್ಧಿ ಕೆಲಸಗಳನ್ನು ಮಾಡುವುದಾಗಿ ನುಡಿದ ಅವರು, ಜಿಲ್ಲೆಯ ಸಮಸ್ಯೆಗಳಿಗೆ ಧ್ವನಿಯಾಗಬೇಕು. ಜನರ ಬಹುಕಾಲದ ಬೇಡಿಕೆ, ನಿರೀಕ್ಷೆಗಳ ಅರಿವಿದ್ದು, ಎರಡೂ ಜಿಲ್ಲೆಯ ಶಾಸಕರ ಸಹಕಾರ ಪಡೆದು ಪರಿಹರಿಸಲು ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದ ಸಚಿವರು, ಸರ್ಕಾರದ ಆಡಳಿತ ಮತ್ತು ಪಕ್ಷ ಎರಡೂ ಕೂಡಾ ಜೊತೆ ಜೊತೆಯಾಗಿ ನಡೆಯಬೇಕು.
ಜನ ಪ್ರಸ್ತುತ ವರ್ಷದಲ್ಲಿ ಬಿಜೆಪಿಯನ್ನು ನಿರಂತರವಾಗಿ ಬೆಂಬಲಿಸುತ್ತಿದ್ದು, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಗೆಲುವು ಸಾಧಿಸಲಿರುವುದಾಗಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾ ಗಡಿಭಾಗ ಹೆಜಮಾಡಿಯಲ್ಲಿ ಜಿಲ್ಲಾಡಳಿತದ ಪರವಾಗಿ ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಕೆ ಸ್ವಾಗತಿಸಿದರು. ಬಳಿಕ ಮಹಿಳಾ ಮೋರ್ಚಾ ಕಾರ್ಯಕರ್ತರು ಆರತಿ ಬೆಳಗಿ ತಿಲಕವಿಟ್ಟು ಬರಮಾಡಿಕೊಂಡರೆ, ಬಿಜೆಪಿ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು.
ಶಾಸಕರಾದ ಲಾಲಾಜಿ ಆರ್ ಮೆಂಡನ್, ಹರೀಶ್ ಪೂಂಜ, ಡಾ. ಭರತ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸುರೇಶ್ ಶೆಟ್ಟಿ ಗುರ್ಮೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಪ್ರಮುಖರಾದ ಕೆ. ಉದಯ ಕುಮಾರ್ ಶೆಟ್ಟಿ, ಯಶಪಾಲ್ ಸುವರ್ಣ, ಕುತ್ಯಾರ್ ನವೀನ್ ಶೆಟ್ಟಿ, ಶ್ರೀಶಾ ನಾಯಕ್, ದಿನಕರ್ ಬಾಬು, ಶಿಲ್ಪಾ ಜಿ ಸುವರ್ಣ, ಗೀತಾಂಜಲಿ ಸುವರ್ಣ, ಶಶಿಕಾಂತ ಪಡುಬಿದ್ರಿ, ಉದಯ ಎಸ್ ಕೊಟ್ಯಾನ್, ಪ್ರವೀಣ್ ಕುಮಾರ್ ಗುರ್ಮೆ, ಸುರೇಂದ್ರ ಪಣಿಯೂರು, ಶ್ರೀಕಾಂತ್ ನಾಯಕ್, ಉದಯ ಶೆಟ್ಟಿ ಇನ್ನಾ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ರವಿ ಶೆಟ್ಟಿ ಪಾದೆಬೆಟ್ಟು, ವಿಷ್ಣುಮೂರ್ತಿ ಆಚಾರ್ಯ, ಮಿಥುನ್ ಹೆಗ್ಡೆ, ಸುವರ್ದನ್ ನಾಯಕ್, ವೀಣಾ ಶೆಟ್ಟಿ, ಸುಮಾ ಶೆಟ್ಟಿ, ಗೋಪಾಲಕೃಷ್ಣ ರಾವ್, ನಯನಾ ಗಣೇಶ್, ಪ್ರಾಣೇಶ್ ಹೆಜಮಾಡಿ, ಗಾಯತ್ರೀ ಪ್ರಭು, ಶರತ್ ಶೆಟ್ಟಿ, ಸಂತೋಷ್ ಶೆಟ್ಟಿ, ರವೀಂದ್ರ ಪ್ರಭು ಸಾಂತೂರು, ಶಿವರಾಮ ಭಂಡಾರಿ, ಪ್ರಸಾದ್ ಪಲಿಮಾರು, ಶಿವಪ್ರಸಾದ್ ಶೆಟ್ಟಿ ಎಲ್ಲದಡಿ, ಸುಧಾಕರ ಕರ್ಕೇರ, ಸಚಿನ್ ಪಿತ್ರೋಡಿ, ಕೀರ್ತನ್ ಹೆಜಮಾಡಿ, ಪ್ರವೀಣ್ ಕುಮಾರ್ ಅಡ್ವೆ ಉಪಸ್ಥಿತರಿದ್ದರು.
ಕಳ್ಳರ ಕೈಚಳಕ: ಸಚಿವರನ್ನು ಸ್ವಾಗತಿಸುವ ಸಂದರ್ಭದಲ್ಲಿ ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್ ಅವರಲ್ಲಿದ್ದ 28 ಸಾವಿರ ರೂ. ಹಾಗೂ ಗುತ್ತಿಗೆದಾರರಾದ ಜೀವನ್ ಶೆಟ್ಟಿ ಅವರ 50 ಸಾವಿರ ರೂ. ಕಳೆದುಕೊಂಡಿದ್ದಾರೆ.