ಇಸ್ರೇಲ್ ನ ವಾಯು ದಾಳಿಗೆ ಪ್ರತಿಯಾಗಿ ಹಿಝ್ಬುಲ್ಲಾದಿಂದ ರಾಕೆಟ್ ದಾಳಿ

Update: 2021-08-06 17:17 GMT
ಸಾಂದರ್ಭಿಕ ಚಿತ್ರ [AP/PTI File Photo]

ಬೈರೂತ್ (ಲೆಬನಾನ್), ಆ. 6: ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ನಡೆಸಿರುವ ವಾಯು ದಾಳಿಗೆ ಪ್ರತಿಯಾಗಿ ಇಸ್ರೇಲಿ ನೆಲೆಗಳ ಸಮೀಪದಲ್ಲಿರುವ ತೆರೆದ ಮೈದಾನಕ್ಕೆ ರಾಕೆಟ್ ಗಳನ್ನು ಹಾರಿಸಿರುವುದಾಗಿ ಲೆಬನಾನ್ ನ ಹಿಝ್ಬುಲ್ಲಾ ಹೇಳಿದೆ. ಇದಕ್ಕೆ ಪ್ರತಿಯಾಗಿ ಸತತ ಎರಡನೇ ದಿನವೂ ಇಸ್ರೇಲ್ ವೈಮಾನಿಕ ದಾಳಿಗಳನ್ನು ನಡೆಸಿದೆ.

ಇಸ್ರೇಲ್ ಯುದ್ಧವಿಮಾನಗಳು ನೆರೆಯ ಲೆಬನಾನ್ ಮೇಲೆ ಗುರುವಾರ ಮುಂಜಾನೆ ಅಪರೂಪದ ವಾಯು ದಾಳಿಗಳನ್ನು ನಡೆಸಿದ ಬಳಿಕ ವಿವಾದಿತ ಶೆಬಾ ಫಾರ್ಮ್ಸ್ ಗೆ ಡಝನ್ ಗಟ್ಟಲೆ ರಾಕೆಟ್ ಗಳನ್ನು ಹಾರಿಸಿರುವುದಾಗಿ ಇರಾನ್ ಬೆಂಬಲಿತ ಹಿಝ್ಬುಲ್ಲಾ ಶುಕ್ರವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಇಸ್ರೇಲ್ ನ ಬಾಂಬ್ ಗಳು ಲೆಬನಾನ್ ನ ತೆರೆದ ಸ್ಥಳಗಳಿಗೆ ಅಪ್ಪಳಿಸಿದವು ಎಂದು ಹಿಝ್ಬುಲ್ಲಾ ಹೇಳಿದೆ.

ಶುಕ್ರವಾರ ಹೇಳಿಕೆಯೊಂದನ್ನು ನೀಡಿರುವ ಇಸ್ರೇಲ್ ಸೇನೆ, ಗಡಿಯಾಚೆಯಿಂದ 10ಕ್ಕೂ ಅಧಿಕ ರಾಕೆಟ್ ಗಳು ಹಾರಿ ಬಂದ ಬಳಿಕ ತನ್ನ ಯುದ್ಧ ವಿಮಾನಗಳು ದಕ್ಷಿಣ ಲೆಬನಾನ್ ಮೇಲೆ ದಾಳಿ ನಡೆಸಿರುವುದಾಗಿ ತಿಿಳಿಸಿದೆ.

2006ರಲ್ಲಿ ಇಸ್ರೇಲ್ ಮತ್ತು ಹಿಝ್ಬುಲ್ಲಾ ಒಂದು ತಿಂಗಳ ಕಾಲ ಯುದ್ಧ ಮಾಡಿದ್ದವು. ಆ ಬಳಿಕ ಉಭಯ ಬಣಗಳ ನಡುವೆ ಶಾಂತಿ ನೆಲೆಸಿದ್ದು, ಇದೇ ಮೊದಲ ಬಾರಿಗೆ ಸಂಘರ್ಷ ಸಂಭವಿಸಿದೆ.‌

ಪರಿಸ್ಥಿತಿ ಕೈಮೀರುತ್ತಿದೆ: ಶಾಂತಿಪಾಲನಾ ಪಡೆ
    
ಇಸ್ರೇಲ್ ಸೇನೆ ಹಾಗೂ ಲೆಬನಾನ್‌ನ ಹಿಝ್‌ಬೊಲ್ಲಾ ಹೋರಾಟಗಾರರ ನಡುವೆ ಶುಕ್ರವಾರ ಗುಂಡಿನ ಘರ್ಷಣೆ ವರದಿಯಾಗಿದ್ದು, ಪರಿಸ್ಥಿತಿ ಅತ್ಯಂತ ಅಪಾಯಕಾರವಾಗಿದೆ ಎಂದು ಲೆಬನಾನ್-ಇಸ್ರೇಲ್ ಗಡಿಯಲ್ಲಿ ಗಸ್ತು ತಿರುಗುತ್ತಿರುವ ವಿಶ್ವಸಂಸ್ಥೆಯ ಶಾಂತಿಪಾಲನೆ ಪಡೆ (ಯುಎನ್‌ಎಫ್‌ಐಎಲ್) ಹೇಳಿಕೆಯೊಂದರಲ್ಲಿ ತಿಳಿಸಿದೆ.
    
‘‘ಇದೊಂದು ಅಪಾಯಕಾರಿ ಸನ್ನಿವೇಶವಾಗಿದೆ. ಕಳೆದ ಎರಡು ದಿನಗಳಲ್ಲಿ ಇತ್ತಂಡಗಳ ನಡುವಿನ ಘರ್ಷಣೆ ಉಲ್ಬಣಿಸಿದೆ ಎಂದು ಯುಎನ್‌ಎಫ್‌ಐಎಲ್ ಹೇಳಿಕೆಯಲ್ಲಿ ತಿಳಿಸಿದೆ. ಪರಿಸ್ಥಿತಿಯನ್ನು ಕೈಮೀರಿಹೋಗುವುದನ್ನು ತಡೆಯಲು ತಾನು ಶ್ರಮಿಸುತ್ತಿರುವುದಾಗಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News