​ಕರಾವಳಿಯ ಮೀನುಗಾರರಿಗೆ ಎಚ್ಚರಿಕೆ

Update: 2021-08-07 14:54 GMT

ಉಡುಪಿ, ಆ.7: ಕರ್ನಾಟಕ ಪಶ್ಚಿಮ ಕರಾವಳಿಯ ಅರಬಿಸಮುದ್ರದಲ್ಲಿ ನಾಳೆ ಹಾಗೂ ಆ.11ರಂದು ಗಂಟೆಗೆ 40ರಿಂದ 50ಕಿ.ಮೀ. ವೇಗದ ಬಿರುಗಾಳಿ ಬೀಸುವ ಸಾಧ್ಯತೆ ಇದ್ದು, ಇದರಿಂದ 2.5ಮೀ.ನಿಂದ 3.6ಮೀ. ಎತ್ತರದ ಅಲೆಗಳು ಸೆಕೆಂಡ್‌ಗೆ 32ರಿಂದ 49ಮೀ.ವೇಗದಲ್ಲಿ ದಡಕ್ಕೆ ಅಪ್ಪಳಿಸುವ ನಿರೀಕ್ಷೆ ಇದೆ. ಇದರಿಂದ ರಾಜ್ಯ ಕರಾವಳಿಯ ಮೂರು ಜಿಲ್ಲೆಗಳ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಅಲ್ಲದೇ ರವಿವಾರ ಹಾಗೂ ಸೋಮವಾರ ಕರಾವಳಿಯಲ್ಲಿ ಭಾರೀ ಮಳೆ ಬೀಳುವ ಸಾಧ್ಯತೆ ಇದೆ ಎಂದೂ ಇಲಾಖೆ ತಿಳಿಸಿದೆ. ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 41.1ಮಿ.ಮೀ. ಮಳೆಯಾಗಿದೆ. ಉಡುಪಿ-31.4 ಮಿ.ಮೀ., ಬ್ರಹ್ಮಾವರ-29.2, ಕಾಪು-29.1, ಕುಂದಾಪುರ-30.9, ಬೈಂದೂರು-25.8, ಕಾರ್ಕಳ-68.6 ಹಾಗೂ ಹೆಬ್ರಿ-59.2ಮಿ.ಮೀ. ಮಳೆ ಯಾದ ಬಗ್ಗೆ ವರದಿಗಳು ಬಂದಿವೆ.

10 ಮನೆಗಳಿಗೆ ಹಾನಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಾದ್ಯಂತ ಸುಮಾರು 10 ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಗಳಿವೆ. ಕಾರ್ಕಳ ತಾಲೂಕು ಮುಂಡ್ಕೂರಿನ ಗೋಪಾಲ ಸಫಲಿಗರ ಮನೆಗೆ 45ಸಾವಿರ ರೂ., ಕುಂದಾಪುರ ತಾಲೂಕು ಕರ್ಕುಂಜೆ ಲಲಿತ ಮನೆಗೆ 40ಸಾವಿರ ಹಾಗೂ ಹೆಬ್ರಿ ತಾಲೂಕು ಮುದ್ರಾಡಿ ಗ್ರಾಮದ ಗೋಪಾಲ ಪಾಣಾರ ಮನೆಗೆ 30ಸಾವಿರ ರೂ.ಹಾನಿಯಾಗಿದೆ.

ಇನ್ನು ಬ್ರಹ್ಮಾವರ ತಾಲೂಕು ಮಣೂರು ಗ್ರಾಮದ ಗೌರಿ ಎಂಬವರ ಮನೆಗೆ ಒಂದು ಲಕ್ಷ ರೂ ನಷ್ಟವಾಗಿದ್ದರೆ, ಹೆಗ್ಗುಂಜೆ ಗ್ರಾಮದ ರುದ್ರಮ್ಮ ಶೆಡ್ತಿ, ವಡ್ಡರ್ಸೆ ಗ್ರಾಮದ ಎಸ್.ಆರ್.ಫಾತಿಮಾ, ಚಾಂತಾರು ಗ್ರಾಮದ ಸತೀಶ್ ಕುಮಾರ್ ಹಾಗೂ ಹರೀಶ್ ಪೂಜಾರಿ ಮನೆಗೆ ಒಟ್ಟು 1.50ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿರುವ ಅಂದಾಜು ಮಾಡಲಾಗಿದೆ.

ಕಾರ್ಕಳ ತಾಲೂಕು ಎಳ್ಳಾರೆ ಗ್ರಾಮದ ಸುಂದರ ನಾಯ್ಕ, ಕಸಬಾ ಗ್ರಾಮದ ಶೋಭಾ ಅವರ ಮನೆ ಮೇಲೆ ಮರಬಿದ್ದು 40,000ರೂ.ನಷ್ಟ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News