×
Ad

ಉಡುಪಿ: 100ಮೀ. ವ್ಯಾಪ್ತಿಯಲ್ಲಿ 5 ಕೊರೋನ ಪ್ರಕರಣಗಳು ಪತ್ತೆಯಾದರೆ ಸಂಪೂರ್ಣ ಸೀಲ್‌ಡೌನ್; ಸಚಿವ ಸುನೀಲ್ ಕುಮಾರ್

Update: 2021-08-07 21:34 IST

ಉಡುಪಿ, ಆ.7: ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿದೆ. 100 ಮೀಟರ್ ವ್ಯಾಪ್ತಿಯಲ್ಲಿ ಐದು ಕೊರೋನ ಪ್ರಕರಣಗಳು ಕಂಡುಬಂದರೆ ಆ ಪ್ರದೇಶವನ್ನು ಕಂಟೈನ್‌ಮೆಂಟ್ ಝೋನ್ ಎಂಬುದಾಗಿ ಘೋಷಿಸಿ ಸಂಪೂರ್ಣ ಸೀಲ್‌ಡೌನ್ ಮಾಡುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಉಡುಪಿ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಕೋವಿಡ್ ನಿಯಂತ್ರಣ ಮತ್ತು ನೆರೆ ಪರಿಹಾರದ ಕುರಿತ ಸಭೆಯ ಬಳಿಕ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಬಗ್ಗೆ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಆಗದಂತೆ ತಡೆಯುವ ನಿಟ್ಟಿನಲ್ಲಿ ಹೆಬ್ರಿಯಲ್ಲಿ ಆಕ್ಸಿಜನ್ ಉತ್ಪದನಾ ಘಟಕವನ್ನು ಈಗಾಗಲೇ ಆರಂಭಿಸಲಾಗಿದೆ. ಉಡುಪಿ ಜಿಲ್ಲಾಸ್ಪತ್ರೆ ಹಾಗೂ ಕುಂದಾಪುರ ತಾಲೂಕು ಆಸ್ಪತ್ರೆಗಳಲ್ಲಿ ಒಟ್ಟು ಮೂರು ಆಕ್ಸಿಜನ್ ಉತ್ಪಾದನಾ ಘಟಕಗಳ ಕಾಮಗಾರಿಗಳು ನಡೆಯುತ್ತಿದ್ದು, ವಾರದೊಳಗೆ ಯಂತ್ರೋಪಕಣ ಗಳನ್ನು ಆಳವಡಿಸಿ ಕಾಮಗಾರಿ ಮುಗಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಸೋಂಕಿತರು ಕೇರ್‌ಸೆಂಟರ್‌ಗೆ
ಕಳೆದ 10 ದಿನಗಳಿಂದ ಜಿಲ್ಲೆಯಲ್ಲಿ 1408 ಸಕ್ರಿಯ ಕೊರೋನಾ ಪ್ರಕರಣ ಗಳಿದ್ದು, ಅದರಲ್ಲಿ 12 ಮಂದಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಮತ್ತು 139 ಮಂದಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಉಳಿದ 1257 ಮಂದಿ ಹೋಮ್ ಐಸೋಲೇಶನ್‌ನಲ್ಲಿದ್ದಾರೆ. ಸೋಂಕಿತರನ್ನು ಕೋವಿಡ್ ಕೇರ್‌ಸೆಂಟರ್‌ಗೆ ಕಡ್ಡಾಯವಾಗಿ ವರ್ಗಾಯಿಸಲಾಗುವುದು. ಸೋಂಕಿತರ ಮನೆಗಳನ್ನು ಕಡ್ಡಾಯವಾಗಿ ಸೀಲ್‌ಡೌನ್ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಒಟ್ಟು 2000 ಬೆಡ್‌ಗಳ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶದಿಂದ ಮಣಿಪಾಲ ಎಂಐಟಿ ಹಾಸ್ಟೆಲ್, ಕಾರ್ಕಳದ ಮಿಯ್ಯೆರು ಹಾಸ್ಟೆಲ್, ಕುಂದಾಪುರ ಹಳೆ ಆದರ್ಶ ಆಸ್ಪತ್ರೆ, ನಿಟ್ಟೆ ಹಾಗೂ ಹೆಬ್ರಿ ಸೇರಿದಂತೆ ಬೇರೆ ಬೇರೆ ಸ್ಥಳಗಳನ್ನು ಗುರುತಿಸಲಾಗಿದೆ. ಸೋಂಕಿತರನ್ನು ಮನ ವೊಲಿಸಿ ಕೇರ್ ಸೆಂಟರ್‌ಗೆ ವರ್ಗಾಯಿಸುವ ಕಾರ್ಯವನ್ನು ಜಿಲ್ಲಾಡಳಿತ ಇಂದಿನಿಂದ ಮಾಡಲಿದೆ ಎಂದರು.

ಐಸಿಯು ಬೆಡ್‌ಗಳ ಹೆಚ್ಚಳ
ಕಳೆದ ಬಾರಿಯಂತೆ ಜಿಲ್ಲೆಯಲ್ಲಿ ಸೋಂಕಿತರಿಗೆ ಯಾವುದೇ ರೀತಿಯ ಅಪಾಯ ಆಗದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಐಸಿಯು ಬೆಡ್‌ಗಳನ್ನು ಜಾಸ್ತಿ ಮಾಡಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಕಾರ್ಕ ಮತ್ತು ಕುಂದಾಪುರ ತಾಲೂಕು ಆಸ್ಪತ್ರೆ ಗಳಲ್ಲಿ ತಲಾ 15, ಮತ್ತು ಜಿಲ್ಲಾಸ್ಪತ್ರೆಯಲ್ಲಿ 20 ಹೆಚ್ಚುವರಿ ಐಸಿಯು ಬೆಡ್ ಗಳನ್ನು ಆ.30ರೊಳಗೆ ಸಿದ್ಧಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.

ನಮ್ಮಲ್ಲಿ ಹೊರರಾಜ್ಯಗಳಿಂದ ಬಂದವರಿಂದಲೂ ಪ್ರಕರಣ ಜಾಸ್ತಿ ಆಗುತ್ತಿದೆ. ಅದೇ ರೀತಿ ಎರಡನೇ ಅಲೆಯಲ್ಲಿ ಕಡಿಮೆ ಸೋಂಕು ಕಂಡು ಬಂದ ಗ್ರಾಪಂಗಳಲ್ಲಿ ಈ ಬಾರಿ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿವೆ. ನಾವು ಅಂತಹ ಗ್ರಾಪಂಗಳಿಗೆ ಹೆಚ್ಚಿನ ಗಮನ ಕೊಡುವ ಕಾರ್ಯ ಮಾಡುತ್ತಿದ್ದೇವೆ ಎಂದರು.

ಎರಡನೇ ಡೋಸ್‌ಗೆ ಆದ್ಯತೆ
ಕೊರೋನ ಲಸಿಕೆಗೆ ಸಂಬಂಧಿಸಿ ಎರಡನೇ ಡೋಸ್ ಪಡೆಯಲು 34ಸಾವಿರ ಮಂದಿ ಅವಧಿ ಮುಗಿದವರಿದ್ದಾರೆ. ಈ ಕುರಿತು ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಮಾತನಾಡಿ ನಮ್ಮ ಜಿಲ್ಲೆಗೆ ಹೆಚ್ಚುವರಿ ಲಸಿಕೆ ಕಳುಹಿಸಿಕೊಡಲು ಮನವಿ ಮಾಡಲಾಗುವುದು. ಜಿಲ್ಲೆಯ ಶೇ.64 ಮಂದಿಗೆ ಮೊದಲ ಡೋಸ್ ನೀಡಿದ್ದು, ಇದರಲ್ಲಿ ಉಡುಪಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಎರಡನೇ ಡೋಸ್ ನಲ್ಲಿ ಒಂದನೇ ಸ್ಥಾನದಲ್ಲಿದೆ. ಸದ್ಯ ನಾವು ಎರಡನೇ ಡೋಸ್ ನೀಡುವವರಿಗೆ ಆದ್ಯತೆ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ಕೊರೋನ ನಿಯಮಾವಳಿಗಳಲ್ಲಿ ಕಠಿಣ ನಿರ್ಬಂಧಗಳು ಜಾರಿಯಲ್ಲಿದ್ದು, ಅದನ್ನು ಕಟ್ಟುನಿಟ್ಟಾಗಿ ಮಾಡಬೇಕಾಗಿದೆ. ನಾನು ಇಂದಿನಿಂದ ಯಾವುದೇ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಮತ್ತು ನನಗೋಸ್ಕರ ಯಾರು ಕೂಡ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಬಾರದು ಎಂದು ಕಾರ್ಯ ಕರ್ತರಲ್ಲಿ ಮನವಿ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಶಾಸಕರಾದ ರಘುಪತಿ ಭಟ್, ಸುಕುಮಾರ್ ಶೆಟ್ಟಿ, ಲಾಲಾಜಿ ಆರ್.ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ.ಜಗದೀಶ್, ಸಿಇಓ ಡಾ.ನವೀನ್ ಭಟ್ ಮೊದಲಾದವರು ಉಪಸ್ಥಿತರಿದ್ದರು.

100ಕೋಟಿ ನಷ್ಟ ಪರಿಹಾರಕ್ಕೆ ಪ್ರಸ್ತಾವ

ತೌತೆ ಚಂಡಮಾರುತದಿಂದ ಜಿಲ್ಲೆಯಲ್ಲಿ ಆಗಿರುವ ಹಾನಿಯ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಈ ಸಂಬಂಧ 100ಕೋಟಿ ರೂ. ನಷ್ಟ ಪರಿಹಾರ ಬಿಡುಗಡೆ ಮಾಡುವಂತೆ ರಾಜ್ಯ ಸರಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.

ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಗ್ರಾಪಂ ಮಟ್ಟದಲ್ಲಿ ವಿಪತ್ತು ನಿರ್ವಹಣೆಗಾಗಿ ಯೋಜನೆಯನ್ನು ರೂಪಿಸಿ ಕಾರ್ಯಪಡೆ ತಂಡವನ್ನು ರಚಿಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ. ಮಳೆಯಿಂದ ಮನೆಗೆ ಹಾನಿಯಾದರೆ ಜಿಲ್ಲಾಡಳಿತ 48 ಗಂಟೆಯೊಳಗೆ ಪರಿಹಾರ ನೀಡುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಆಯಾ ತಹಶೀಲ್ದಾರ್‌ಗೆ ವಿಪತ್ತು ನಿರ್ವಹಣೆಗಾಗಿ ಹಣ ಬಿಡುಗಡೆ ಮಾಡಲಾಗಿದೆ. ಜಿಲ್ಲಾಡಳಿತದಲ್ಲಿ ವಿಪತ್ತು ನಿರ್ವಹಣೆಗಾಗಿ 11ಕೋಟಿ ರೂ. ಹಣ ಮೀಸಲಿರಿಸಲಾಗಿದೆ. ಯಾವುದೇ ಹಂತದಲ್ಲಿ ಯಾವುದೇ ಪರಿಸ್ಥಿತಿ ಎದುರಿ ಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News