ಮಂಗಳೂರು: ​ಎರೆಹುಳ ಗೊಬ್ಬರ ತೊಟ್ಟಿ ನಿರ್ಮಾಣ ತರಬೇತಿ

Update: 2021-08-07 16:17 GMT

ಮಂಗಳೂರು, ಆ.7: ಸ್ವಾತಂತ್ರ ಮಹೋತ್ಸವದ ಅಮೃತಮಹೋತ್ಸವ ಅಂಗವಾಗಿ ಜಿಲ್ಲಾ ಪಂಚಾಯತ್ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋದಲ್ಲಿ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತಬಂಧು ಅಭಿಯಾನದಡಿ ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣ ಕುರಿತ ತರಬೇತಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಪಂ ಉಪಕಾರ್ಯದರ್ಶಿ ಆನಂದ ಕುಮಾರ್ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿಶೇಷವಾಗಿ ರೈತ ಬಂಧು ಅಭಿಯಾನದ ಮೂಲಕ ಪ್ರತಿ ಗ್ರಾಮ ಪಂಚಾಯತ್‌ನಲ್ಲಿ 25 ಎರೆಹುಳು ಗೊಬ್ಬರ ತೊಟ್ಟಿಯನ್ನು ನಿರ್ಮಿಸಿ, ಆ ಮೂಲಕ ಸಾವಯವ ಗೊಬ್ಬರ ಉತ್ಪಾದನೆಗೆ ರೈತರನ್ನು ಪ್ರೇರೇಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರ ವಿಜ್ಞಾನಿ ಡಾ. ನವೀನ್ ಕುಮಾರ್ ಮಾತನಾಡಿ, ಎರೆಹುಳುಗಳು ಹಾಗೂ ಭೂಮಿಗೂ ತಾಯಿಯ ಕರುಳ ಬಳ್ಳಿಯ ಸಂಬಂಧವಿದ್ದಂತೆ. ಇವು ಮಣ್ಣಿನಲ್ಲಿರುವ ತ್ಯಾಜ್ಯಗಳನ್ನು ಸಾವಯವ ಗೊಬ್ಬರವನ್ನಾಗಿ ಪರಿವರ್ತಿಸುತ್ತವೆ. ಮಣ್ಣಿನಲ್ಲಿರುವ ಕೆಲವೇ ಕೆಲವು ಹುಳುಗಳಲ್ಲಿ ಎರೆ ಹುಳವು ಒಂದು. ಇವು ನೀರನ್ನು ಭೂಮಿಗೆ ಇಂಗುವಂತೆಯೂ ಮಾಡುತ್ತದೆ. ವಿಶೇಷವಾಗಿ 17 ರೀತಿಯ ಪೋಷಕಾಂಶಗಳು ಎರೆಗೊಬ್ಬರದಲ್ಲಿದೆ. ಕೃಷಿಕರು ಸಣ್ಣ ತೊಟ್ಟಿಗಳನ್ನು ರಚಿಸಿಕೊಂಡು ಸಾವಯವ ಎರೆಗೊಬ್ಬರ ಮಾಡಬಹುದು. ಈ ಗೊಬ್ಬರ ಬಳಕೆ ಮಾಡುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.

ಎರೆಹುಳು ಗೊಬ್ಬರ ತೊಟ್ಟಿ ರಚನೆ ಮತ್ತು ಎರೆಹುಳು ಸಾಕಾಣಿಕೆಯ ಪ್ರಾತ್ಯಕ್ಷಿಕೆ ಮೂಲಕ ವಿವರವಾದ ಮಾಹಿತಿ ನೀಡಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ತಾಜ್ಯ ವಸ್ತುಗಳ ನಿರ್ವಹಣೆ ಇಂದು ಬಹುದೊಡ್ಡ ಸವಾಲಾಗಿದೆ. ತ್ಯಾಜಗಳಿಗೆ ಪರಿಹಾರವಾಗಿ ಸಾವಯವ ಗೊಬ್ಬರವಾಗಿ ಮಾಡಬಹುದಾಗಿದೆ. ಎರೆಹುಳು ಗೊಬ್ಬರದ ತೊಟ್ಟಿಯನ್ನು ಮಾಡಲು ಜಿಲ್ಲೆ ಅತ್ಯಂತ ಸೂಕ್ತವಾಗಿದೆ. ಹಾಗಾಗಿ ಕೋಳಿ, ಆಡು ಗೊಬ್ಬರಗಳನ್ನು ತೋಟಗಳಿಗೆ ಹಾಕುತ್ತಿದ್ದಾರೆ ಎಂದರು.

ಜಿಪಂನ ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಕಿಶನ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ಸಂಯೋಜಕ ಸುನಿತಾ ಸಹಕರಿಸಿದರು.
ಜಿಲ್ಲೆಯ ಎಲ್ಲ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ತಾಲೂಕು ನರೇಗಾ ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕರು, ಮಾಹಿತಿ ಶಿಕ್ಷಣ ಸಂವಹನ ಸಂಯೋಜಕರು ತರಬೇತಿಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News