​ಆ.9: ಕಾರ್ಪೊರೇಟ್ ಕಂಪೆನಿಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನೆ

Update: 2021-08-07 16:22 GMT

ಮಂಗಳೂರು: ಕ್ವಿಟ್ ಇಂಡಿಯಾ ಚಳವಳಿಯ ಸವಿನೆನಪಿನಲ್ಲಿ ದೇಶದ ಸಂಪತ್ತನ್ನು ಲೂಟಿ ಹೊಡೆಯುತ್ತಿರುವ ಕಾರ್ಪೊರೇಟ್ ಕಂಪೆನಿಗಳ ವಿರುದ್ಧ ಹಾಗೂ ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಆ.9ರಂದು ದೇಶವ್ಯಾಪಿ ಪ್ರತಿಭಟನೆ ಜರುಗಲಿದೆ. ಅಂದು ಬೆಳಗ್ಗೆ 10 ಗಂಟೆಗೆ ನಗರದ ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನ ಜರುಗಲಿದೆ ಎಂದು ರೈತ ಕಾರ್ಮಿಕ ಸಂಘಟನೆಗಳಾದ ಸಿಐಟಿಯು ಹಾಗೂ ಎಐಕೆಎಸ್ ಪ್ರಕಟನೆ ತಿಳಿಸಿದೆ.

ಕೃಷಿ ರಂಗದ ಸುಧಾರಣೆಗಳ ಹೆಸರಿನಲ್ಲಿ ಕೇಂದ್ರ ಸರಕಾರ ಅಂಗೀಕರಿಸಿರುವ ಮೂರು ಹೊಸ ಕೃಷಿ ಕಾನೂನುಗಳು ಸಂಪೂರ್ಣವಾಗಿ ರೈತ ವಿರೋಧಿಯಾಗಿದ್ದು, ಕಾರ್ಪೊರೇಟ್ ಕಂಪೆನಿಗಳ ಪರವಾಗಿದೆ. ಇಂತಹ ದೇಶವಿರೋಧಿ ಕೃಷಿ ನೀತಿಗಳ ವಿರುದ್ಧ ರೈತರು ಕಳೆದ ಏಳು ತಿಂಗಳಿನಿಂದ ಹೋರಾಟದ ಪಥದಲ್ಲಿದ್ದರೂ, ಸರಕಾರವು ಮಾತ್ರ ದಿವ್ಯ ಮೌನ ವಹಿಸಿದೆ ಎಂದು ಸಂಘಟನೆಗಳು ಆರೋಪಿಸಿವೆ.

ಕಾರ್ಮಿಕ ವರ್ಗದ ಎಲ್ಲ ಪ್ರಮುಖ ಕಾನೂನುಗಳನ್ನು ಸಂಹಿತೆಗಳನ್ನಾಗಿ ಮಾರ್ಪಡಿಸಿ ಕಾರ್ಮಿಕರ ಹಕ್ಕು ಬಾಧ್ಯತೆಗಳನ್ನು ಕಸಿಯಲು ಹೊರಟಿದೆ. ಇಂತಹ ಫ್ಯಾಸಿಸ್ಟ್ ಸರಕಾರದ ವಿರುದ್ಧ ರೈತ ಕಾರ್ಮಿಕರು ಜನಸಾಮಾನ್ಯರು ಸಂಘಟಿತ ಹೋರಾಟ ನಡೆಸಬೇಕಾಗಿದೆ.ಅಂದು ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷವಾಕ್ಯದೊಂದಿಗೆ ಕ್ವಿಟ್ ಇಂಡಿಯಾ ಚಳವಳಿಯು ಸ್ವಾತಂತ್ರ ಸಂಗ್ರಾಮದಲ್ಲಿ ಮಹತ್ವದ ಮೈಲುಗಲ್ಲಾಗಿದೆ ಎಂದು ತಿಳಿಸಲಾಗಿದೆ.

ಇಂದು ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುವ ಕಾರ್ಪೊರೇಟ್ ಕಂಪೆನಿಗಳ ವಿರುದ್ಧ ಎರಡನೆಯ ಸ್ವಾತಂತ್ರ ಸಂಗ್ರಾಮಕ್ಕೆ ರೈತ ಕಾರ್ಮಿಕರು ಅಣಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 9ರಂದು ಜರುಗಲಿರುವ ಪ್ರತಿಭಟನೆಯಲ್ಲಿ ರೈತ ಕಾರ್ಮಿಕರು, ಸಾರ್ವಜನಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಎಐಕೆಎಸ್ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಹಾಗೂ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News