×
Ad

ಅಫ್ಘಾನಿಸ್ತಾನ ತೊರೆಯುವಂತೆ ತನ್ನ ಪ್ರಜೆಗಳಿಗೆ ಸೂಚಿಸಿದ ಅಮೆರಿಕ

Update: 2021-08-07 21:56 IST

ಕಾಬೂಲ್, ಆ.7: ಕಳೆದ ಕೆಲ ದಿನಗಳಿಂದ ತಾಲಿಬಾನ್ ತನ್ನ ಆಕ್ರಮಣವನ್ನು ತೀವ್ರಗೊಳಿಸುತ್ತಿರುವ ಹಿನ್ನೆಲೆಯಲ್ಲಿ, ಅಫ್ಘಾನಿಸ್ತಾನ ತೊರೆಯುವಂತೆ ತನ್ನ ಪ್ರಜೆಗಳಿಗೆ ಅಮೆರಿಕ ಶನಿವಾರ ಸೂಚಿಸಿದೆ. ತಕ್ಷಣವೇ ಲಭ್ಯ ವಾಣಿಜ್ಯ ವಿಮಾನ ಬಳಸಿಕೊಂಡು ಅಮೆರಿಕದ ಪ್ರಜೆಗಳು ಅಫ್ಘಾನಿಸ್ತಾನ ತೊರೆಯಬೇಕು. ಅಲ್ಲಿನ ಭದ್ರತಾ ಪರಿಸ್ಥಿತಿಯ ಕಾರಣ ಹಾಗೂ ಸಿಬಂದಿಗಳ ಸಂಖ್ಯೆ ಕಡಿಮೆ ಇರುವುದರಿಂದ ಅಮೆರಿಕದ ರಾಯಭಾರಿ ಕಚೇರಿಗೆ ಅಮೆರಿಕ ಪ್ರಜೆಗಳಿಗೆ ನೆರವಾಗುವ ಸೀಮಿತ ಅವಕಾಶವಷ್ಟೇ ಇದೆ ಎಂದು ಕಾಬೂಲ್ನ ಅಮೆರಿಕದ ರಾಯಭಾರಿ ಕಚೇರಿಯ ಹೇಳಿಕೆ ತಿಳಿಸಿದೆ. ‌

ಅಫ್ಘಾನಿಸ್ತಾನದ ನಾಗರಿಕರ ಪ್ರತೀಕಾರದ ಹತ್ಯೆ ಪ್ರಕರಣಗಳನ್ನು ನಿಕಟವಾಗಿ ಗಮನಿಸಲಾಗುತ್ತಿದ್ದು ಇದು ಅತ್ಯಂತ ಆತಂಕಕಾರಿಯಾಗಿದೆ. ತಾಲಿಬಾನ್ ಅಂತರಾಷ್ಟ್ರೀಯ ಮಾನ್ಯತೆಯನ್ನು ಬಯಸುವುದಾದರೆ ಇಂತಹ ಕೃತ್ಯಗಳು ಅವರಿಗೆ ಖಂಡಿತಾ ನೆರವಾಗುವುದಿಲ್ಲ. ಅದರ ಬದಲು ಇದೇ ಶಕ್ತಿಯನ್ನು ಶಾಂತಿ ಮಾತುಕತೆಗೆ ಬಳಸಿದರೆ ಒಳಿತು ಎಂದು ಶುಕ್ರವಾರ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಶ್ವೇತಭವನದ ವಕ್ತಾರ ಜೆನ್ ಸಾಕಿ ಹೇಳಿದ್ದರು. ಅಫ್ಘಾನಿಸ್ತಾನದಿಂದ ವಿದೇಶಿ ಪಡೆಗಳ ವಾಪಸಾತಿ ಪ್ರಕ್ರಿಯೆ ಆರಂಭವಾದಂದಿನಿಂದ ದೇಶದ ಪ್ರಮುಖ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ತಾಲಿಬಾನ್ ಪಡೆ ತೀವ್ರ ಆಕ್ರಮಣ ಮುಂದುವರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News