ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನದ ಮೇಲಿನ ದಾಳಿ ಪ್ರಕರಣ: 50 ಮಂದಿ ಬಂಧನ, 150 ಮಂದಿಯ ವಿರುದ್ಧ ಕೇಸು

Update: 2021-08-07 16:45 GMT

ಇಸ್ಲಾಮಾಬಾದ್, ಆ.7: ಪಾಕಿಸ್ತಾನದ ರಹೀಂ ಯಾರ್ ಖಾನ್ ಜಿಲ್ಲೆಯಲ್ಲಿ ಪ್ರಾರ್ಥನಾ ಸ್ಥಳವನ್ನು ಅಪವಿತ್ರಗೊಳಿಸಲಾಗಿದೆ ಎಂದು ಆಕ್ರೋಶಗೊಂಡ ಗುಂಪೊಂದು ಹಿಂದು ದೇವಸ್ಥಾನವನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ 50ಕ್ಕೂ ಹೆಚ್ಚು ಮಂದಿಯನ್ನು ಶನಿವಾರ ಬಂಧಿಸಲಾಗಿದೆ. ಬಂಧಿತರಲ್ಲಿ ಪ್ರಧಾನ ಆರೋಪಿಯೂ ಸೇರಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.   

ದೇವಸ್ಥಾನವನ್ನು ಧ್ವಂಸಗೊಳಿಸಿದ ನಾಚಿಕೆಗೇಡಿನ ಪ್ರಕರಣಕ್ಕೆ ಸಂಬಂಧಿಸಿದ ವೀಡಿಯೊ ದೃಶ್ಯಾವಳಿ ಆಧಾರದಲ್ಲಿ ಇದುವರೆಗೆ 50ಕ್ಕೂ ಅಧಿಕ ಶಂಕಿತರನ್ನು ಬಂಧಿಸಿದ್ದು 150ಕ್ಕೂ ಹೆಚ್ಚು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಉಸ್ಮಾನ್ ಬುಝ್ದಾರ್ ಟ್ವೀಟ್ ಮಾಡಿದ್ದಾರೆ. ಬಂಧಿತ ಕೆಲವರ ಫೋಟೋ ಶೇರ್ ಮಾಡಿಕೊಂಡಿರುವ ಅವರು, ಭವಿಷ್ಯದಲ್ಲಿ ಇಂತಹ ಘಟನೆ ನಡೆಯದಂತೆ ನಾವು ಖಾತರಿಪಡಿಸುತ್ತೇವೆ. ಅಲ್ಲದೆ ದೇವಸ್ಥಾನದ ಮರುನಿರ್ಮಾಣ ಕಾರ್ಯ ಅತ್ಯಂತ ಕ್ಷಿಪ್ರಗತಿಯಲ್ಲಿ ಸಾಗಿದೆ ಎಂದವರು ಹೇಳಿದ್ದಾರೆ. ದೇವಳ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಮುಖ್ಯ ಶಂಕಿತರನ್ನು ಬಂಧಿಸಲಾಗಿದ್ದು ಪಿಪಿಸಿ(ಪಾಕಿಸ್ತಾನ ದಂಡ ಸಂಹಿತೆ)ಯಡಿ ಭಯೋತ್ಪಾದನೆ ಹಾಗೂ ಇತರ ಸೆಕ್ಷನ್ ಗಳಡಿ 150ಕ್ಕೂ ಅಧಿಕ ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ರಹೀಂ ಯಾರ್ ಖಾನ್ ನ ಜಿಲ್ಲಾ ಪೊಲೀಸ್ ಅಧಿಕಾರಿ ಅಸದ್ ಸರ್ಫ್ರಾಝ್ ಹೇಳಿದ್ದಾರೆ. 

ದೇವಸ್ಥಾನ ಧ್ವಂಸ ಪ್ರಕರಣ ಬುಧವಾರ ಸಂಭವಿಸಿದ್ದರೂ ಇದುವರೆಗೆ ದುಷ್ಕರ್ಮಿಗಳ ಬಂಧನವಾಗದ ಬಗ್ಗೆ ಹಾಗೂ ದಾಳಿ ತಡೆಯುವಲ್ಲಿ ವಿಫಲವಾದ ಬಗ್ಗೆ ಶುಕ್ರವಾರ ಪಾಕಿಸ್ತಾನದ ಸುಪ್ರೀಂಕೋರ್ಟ್ ಅಧಿಕಾರಿಗಳನ್ನು ತೀವ್ರ ತರಾಟೆಗೆತ್ತಿಕೊಂಡಿತ್ತು. ಈ ಘಟನೆ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಪ್ರತಿಷ್ಟೆಗೆ ಮಸಿಬಳಿದಿದೆ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಪ್ರಾರ್ಥನಾ ಮಂದಿರ ಅಪವಿತ್ರಗೊಳಿಸಿದ ಆರೋಪದಲ್ಲಿ 8 ವರ್ಷದ ಬಾಲಕನನ್ನು ಬಂಧಿಸಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಾಧೀಶರು, ಅಪ್ರಾಪ್ತ ವಯಸ್ಸಿನವರ ಮಾನಸಿಕ ಸಾಮರ್ಥ್ಯದ ಬಗ್ಗೆ ಪೊಲೀಸರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ 13ಕ್ಕೆ ಮುಂದೂಡಿದೆ. ದೇವಸ್ಥಾನವನ್ನು ಧ್ವಂಸಗೊಳಿಸಿರುವುದನ್ನು ಖಂಡಿಸಿ ಪಾಕ್ ಸಂಸತ್ತು ಶುಕ್ರವಾರ ನಿರ್ಣಯ ಅಂಗೀಕರಿಸಿದೆ. ಭಾರತ ಗುರುವಾರ ಹೊಸದಿಲ್ಲಿಯ ಪಾಕ್ ರಾಯಭಾರಿ ಕಚೇರಿಯ ಮುಖ್ಯಸ್ಥರನ್ನು ಕರೆಸಿಕೊಂಡು ತೀವ್ರ ಪ್ರತಿಭಟನೆ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News