ಸಿಂಗಾಪುರದಲ್ಲಿ ಸಂಸ್ಕರಿತ ಚರಂಡಿ ನೀರು ಕುಡಿಯುವ ನೀರಾಗಿ ಬಳಕೆ

Update: 2021-08-10 14:48 GMT
ಸಾಂದರ್ಭಿಕ ಚಿತ್ರ

ಸಿಂಗಾಪುರ, ಆ. 10: ಚರಂಡಿ ನೀರನ್ನೇ ಕುಡಿಯುವ ನೀರಾಗಿ ಪರಿವರ್ತಿಸುವ ಮರುಬಳಕೆ ಘಟಕಗಳನ್ನು ಸ್ಥಾಪಿಸಲು ಸಿಂಗಾಪುರ ಮುಂದಾಗಿದೆ. ಈ ಘಟಕಗಳು ಚರಂಡಿ ನೀರನ್ನು ಎಷ್ಟು ಶುದ್ಧ ಮಾಡುತ್ತವೆಂದರೆ ಅದನ್ನು ಮಾನವರು ಸೇವಿಸಬಹುದಾಗಿದೆ. ಜೊತೆಗೆ ಸಮುದ್ರ ಮಾಲಿನ್ಯವನ್ನು ತಡೆಗಟ್ಟಬಹುದಾಗಿದೆ.

ಸಿಂಗಾಪುರವೆಂಬ ಸಣ್ಣ ದ್ವೀಪ ರಾಷ್ಟ್ರದಲ್ಲಿ ನೈಸರ್ಗಿಕ ನೀರಿನ ಮೂಲಗಳು ಕಡಿಮೆ. ಅದು ಸುದೀರ್ಘ ಕಾಲದಿಂದ ನೀರಿಗಾಗಿ ನೆರೆಯ ಮಲೇಶ್ಯವನ್ನು ಅವಲಂಬಿಸುತ್ತಿತ್ತು.
ನೀರಿನಲ್ಲಿ ಸ್ವಾವಲಂಬನೆಯನ್ನು ಹೆಚ್ಚಿಸುವುದಕ್ಕಾಗಿ ಸರಕಾರವು ಚರಂಡಿ ನೀರನ್ನು ಸಂಸ್ಕರಿಸುವ ಸುಧಾರಿತ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿದೆ. ಇದಕ್ಕಾಗಿ ಒಳಚರಂಡಿ ಮಾರ್ಗಗಳು ಮತ್ತು ಹೈಟೆಕ್ ಘಟಕಗಳನ್ನು ಸ್ಥಾಪಿಸಲಾಗಿದೆ.

ಸಂಸ್ಕರಿತ ನೀರು ಈಗ ಸಿಂಗಾಪುರದ 40 ಶೇಕಡಡ ನೀರಿನ ಬೇಡಿಕೆಯನ್ನು ಪೂರೈಸುತ್ತದೆ. ಇದು 2060ರ ವೇಳೆಗೆ 55 ಶೇಕಡಕ್ಕೆ ಏರಬಹುದಾಗಿದೆ ಎಂದು ದೇಶದ ನೀರು ಸಂಸ್ಥೆ ಹೇಳಿದೆ.

ಈ ಪೈಕಿ ಹೆಚ್ಚಿನ ನೀರನ್ನು ಕೈಗಾರಿಕೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ ಹಾಗೂ ಸ್ವಲ್ಪ ಭಾಗವನ್ನು ನಗರದ 57 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸುವ ಸರೋವರಗಳಿಗೂ ಬಿಡಲಾಗುತ್ತದೆ. ಇದು ಸಮುದ್ರ ಮಾಲಿನ್ಯವನ್ನೂ ಕಡಿಮೆ ಮಾಡುತ್ತದೆ. ಸಣ್ಣ ಪ್ರಮಾಣದ ಸಂಸ್ಕರಿತ ನೀರನ್ನು ಮಾತ್ರ ಸಮುದ್ರಕ್ಕೆ ಬಿಡಲಾಗುತ್ತಿದೆ.

ಹೆಚ್ಚಿನ ದೇಶಗಳು ಇದಕ್ಕೆ ತದ್ವಿರುದ್ಧವಾಗಿವೆ. ಜಗತ್ತಿನ 80 ಶೇಕಡ ತ್ಯಾಜ್ಯ ನೀರು ಸಂಸ್ಕರಿಸಲ್ಪಡದೆ ಸಮುದ್ರಗಳನ್ನು ಸೇರುತ್ತದೆ ಎಂದು ವಿಶ್ವಸಂಸ್ಥೆಯ ಅಂದಾಜೊಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News