ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರ

Update: 2021-08-10 15:21 GMT

ಹೊಸದಿಲ್ಲಿ: ರಾಜ್ಯಗಳು ಹಾಗೂ  ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ಆದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯನ್ನು ರೂಪಿಸಲು ಅನುಮತಿಸುವ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯು ಇಂದು ಅಂಗೀಕರಿಸಿದೆ. ಈ ಪಟ್ಟಿಗಳು ಕೇಂದ್ರ ಸರಕಾರಕ್ಕಿಂತ ಭಿನ್ನವಾಗಿರಬಹುದು. ಸಂವಿಧಾನ ತಿದ್ದುಪಡಿ ಮಸೂದೆಯನ್ನು 385 ಮತಗಳಿಂದ ಅನುಮೋದಿಸಲಾಗಿದೆ ಹಾಗೂ  ಯಾರ ವಿರೋಧವೂ ವ್ಯಕ್ತವಾಗಿಲ್ಲ ಎಂದು NDTV ವರದಿ ಮಾಡಿದೆ.

ಲೋಕಸಭೆಯಲ್ಲಿ ಇಂದು ಅಂಗೀಕರಿಸಿರುವ ಮಸೂದೆಯು ಕಾನೂನಾದರೆ  ರಾಜ್ಯಗಳು ತಮ್ಮದೇ ಆದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯನ್ನು ರೂಪಿಸಲು ಅನುವು ಮಾಡಿಕೊಡುತ್ತದೆ. 

ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಪ್ರತ್ಯೇಕ ಪಟ್ಟಿ ರಚಿಸಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅವಕಾಶ ನೀಡುವ ಸಂವಿಧಾನ(127ನೇ ತಿದ್ದುಪಡಿ)ಮಸೂದೆಯನ್ನು ಕೇಂದ್ರ ಸರಕಾರವು ಸೋಮವಾರ ಲೋಕಸಭೆಯಲ್ಲಿ ಮಂಡಿಸಿತ್ತು. ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಮಸೂದೆಯನ್ನು ಸಂಸತ್ ನಲ್ಲಿ ಮಂಡಿಸಿದರು.

ಈ ಮಸೂದೆಗೆ ವಿವಿಧ ವಿಪಕ್ಷಗಳ ನಾಯಕರು ಬೆಂಬಲ ನೀಡಿದ್ದು,  ಇಂದೇ(ಸೋಮವಾರ)ಅಂಗೀಕಾರವಾಗಬೇಕೆಂದು ನಾವು ಬಯಸುತ್ತೇವೆ ಎಂದು ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News