×
Ad

ಬಂಟ್ವಾಳ; ಪೈಪ್ ಕೊರೆದು ಡೀಸೆಲ್‌ ಕಳವು ಪ್ರಕರಣ : ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Update: 2021-08-11 15:42 IST

ಬಂಟ್ವಾಳ, ಆ.11: ಭೂಮಿಯಡಿ ಹಾದು ಹೋದ ಪೈಪನ್ನು ಕೊರೆದು ಲಕ್ಷಾಂತರ ರೂ. ಮೌಲ್ಯದ ಪೆಟ್ರೋಲಿಯಂ ಉತ್ಪನ್ನ ಕಳವು ಮಾಡಿರುವ ಆರೋಪದಲ್ಲಿ ಪ್ರಮುಖ ಆರೋಪಿ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಅರಳ ಗ್ರಾಮದ ಸೊರ್ನಾಡು ಅರ್ಬಿ ನಿವಾಸಿ ಐವನ್‌ ಚಾರ್ಲ್‌ ಪಿಂಟೋ (43) ಹಾಗೂ ಪಚ್ಚನಾಡಿ ಬೋಂದೆಲ್‌ ನಿವಾಸಿ ಅಜಿತ್‌ ಮತ್ತು ಕಣ್ಣೂರು ನಿವಾಸಿ ಜೋಯೆಲ್‌ ಪ್ರೀತಮ್‌ ಡಿಸೋಜ ಬಂಧಿತ ಆರೋಪಿಗಳು.

ಐವನ್‌ ಚಾರ್ಲ್‌ ಪಿಂಟೋ ಪ್ರಕರಣದ ಪ್ರಮುಖ ಆರೋಪಿಯಾದರೆ, ಅಜಿತ್‌ ಮತ್ತು ಜೋಯೆಲ್‌ ಪ್ರೀತಮ್‌ ಡಿಸೋಜ ಪೈಪನ್ನು ಕೊರೆದು ಅದಕ್ಕೆ ಬೇರೆ ಪೈಪ್ ಅಳವಡಿಸಿಕೊಟ್ಟ ವೆಲ್ಡರ್‌ ಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆರೋಪಿ ಐವನ್ ಚಾರ್ಲ್ ಪಿಂಟೋ ತನ್ನ ಜಮೀನಿನಲ್ಲಿ ಸುಮಾರು 20 ಅಡಿ ಆಳದಲ್ಲಿ ಹಾದು ಹೋದ ಆಯಿಲ್‌ ಮತ್ತು ನ್ಯಾಚುರಲ್‌ ಲಿಮಿಟೆಡ್‌ ಹಾಗೂ ಹಿಂದೂಸ್ತಾನ್‌ ಪೆಟ್ರೋಲಿಯಂ ಸಂಸ್ಥೆಗೆ ಸೇರಿದ ಡೀಸೆಲ್‌ ಸಾಗಾಟದ ಪೈಪ್ ಅನ್ನು ಕೊರೆದು ಅದಕ್ಕೆ ಬೇರೊಂದು ಪೈಪ್‌ ಅಳವಡಿಸಿ ಆ ಮೂಲಕ ಡಿಸೇಲ್ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಬಗ್ಗೆ ಸಂಸ್ಥೆಯವರು ನೀಡಿದ ದೂರಿನಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಕಂಪೆನಿಗೆ ಸಾಗಾಟವಾಗುತ್ತಿದ್ದ ಡೀಸೆಲ್‌ ಅಳತೆಯಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಕಂಪೆನಿಯವರು ತಂತ್ರಜ್ಞಾನ ಬಳಸಿ ತಪಾಸಣೆ ಮಾಡಿದಾಗ ಕಳವು ಕೃತ್ಯ ಬೆಳಕಿಗೆ ಬಂದಿತ್ತು. ಜುಲೈ 30ರಂದು ಭೂಮಿಯನ್ನು ಅಗೆದು ಪೊಲೀಸರು ಪರಿಶೀಲನೆ ನಡೆಸಿದ್ದರು. ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ  ಕೆಲವರು ಭಾಗಿಯಾಗಿದ್ದು ಅವರು ತಲೆಮರೆಸಿ ಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಜುಲೈ 11ರಿಂದ ಸುಮಾರು 40 ಲಕ್ಷ ರೂ. ಮೌಲ್ಯದ ಡೀಸೆಲ್‌ ಕಳ್ಳತನ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಒಂದು ಜೀಪ್‌, ಪೆಟ್ರೋಲ್ ಉತ್ಪನ್ನ ಸಾಗಿಸಲು ಬಳಸಿದ ಕ್ಯಾನ್‌ ಗಳು ಮತ್ತು ಡಿಸೇಲ್‌ ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News