ಇಸ್ರೋದ ಭೂ ವೀಕ್ಷಣಾ ಉಪಗ್ರಹದ ಉಡಾವಣೆಗೆ ಕ್ಷಣಗಣನೆ ಆರಂಭ

Update: 2021-08-11 15:25 GMT
photo: twitter.com/isro

ಹೊಸದಿಲ್ಲಿ,ಆ.11: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯು ತನ್ನ ಅತ್ಯಾಧುನಿಕ ಭೂ ವೀಕ್ಷಣಾ ಉಪಗ್ರಹ (ಇಒಎಸ್-03)ವನ್ನು ಆ.12ರಂದು ಗುರುವಾರ ನಭಕ್ಕೆ ಉಡಾವಣೆಗೊಳಿಸಲು ಸಜ್ಜಾಗಿದ್ದು,‌ ಅದಕ್ಕಾಗಿ ಕ್ಷಣಗಣನೆ ಆರಂಭಗೊಂಡಿದೆ. ಈ ಉಪಗ್ರಹವು ನೈಸರ್ಗಿಕ ವಿಕೋಪಗಳು ಮತ್ತು ಮೇಘಸ್ಫೋಟಗಳು ಹಾಗೂ ಗುಡುಗುಸಿಡಿಲಿನಂತಹ ಹವಾಮಾನ ಘಟನೆಗಳ ಮೇಲೆ ನಿಗಾಯಿರಿಸಲು ನೆರವಾಗಲಿದೆ.

ಗುರುವಾರ ನಸುಕಿನ 5:45 ಗಂಟೆಗೆ ಹವಾಮಾನ ಸ್ಥಿತಿಗಳಿಗೊಳಪಟ್ಟು ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್ಎಲ್ವಿ-ಎಫ್10 ಮೂಲಕ ಉಪಗ್ರಹದ ಉಡಾವಣೆಯು ನಡೆಯಲಿದೆ. ಇಸ್ರೋದ ಅಧಿಕೃತ ಟ್ವಟರ್ ಖಾತೆಯು ಬುಧವಾರ ಬೆಳಿಗ್ಗೆ ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಲ್ಲಿಯ ಜಿಎಸ್ಎಲ್ವಿ-ಎಫ್10 ಚಿತ್ರವನ್ನು ಹಂಚಿಕೊಂಡಿದ್ದು,ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭಗೊಂಡಿದೆ ಎಂದು ತಿಳಿಸಿದೆ.

ಇಒಎಸ್-03 ಕುಶಾಗ್ರಮತಿಯ ಅತ್ಯಾಧುನಿಕ ಉಪಗ್ರಹವಾಗಿದ್ದು, ನೈಜ ಸಮಯಕ್ಕೆ ಸಮೀಪದ ವಿಶಾಲ ಪ್ರದೇಶಗಳ ಚಿತ್ರಗಳನ್ನು ಆಗಾಗ್ಗೆ ಮಧ್ಯಂತರಗಳಲ್ಲಿ ಒದಗಿಸುತ್ತದೆ ಎಂದು ಇಸ್ರೋದ ವೆಬ್ಸೈಟ್ ನಲ್ಲಿ ವಿವರಿಸಲಾಗಿದೆ. ನೈಸರ್ಗಿಕ ವಿಕೋಪಗಳು ಮತ್ತು ಇತರ ಘಟನೆಗಳ ಮೇಲೆ ನಿಗಾಯಿರಿಸಲು ನೆರವಾಗುವ ಅದು ಕೃಷಿ,ಅರಣ್ಯ,ಜಲಮೂಲಗಳು ಹಾಗೂ ವಿಪತ್ತು ಮುನ್ನೆಚ್ಚರಿಕೆ,ಚಂಡಮಾರುತ,ಮೇಘಸ್ಪೋಟ ಅಥವಾ ಗುಡುಗುಸಿಡಿಲುಗಳ ಕುರಿತು ನಿಗಾ ಇರಿಸಲು ‘ಸ್ಪೆಕ್ಟ್ರಲ್ ಸಿಗ್ನೇಚರ್’ನಂತಹ ಅಗತ್ಯ ಮಾಹಿತಿಗಳನ್ನೂ ಒದಗಿಸಲಿದೆ. ಉಪಗ್ರಹವು 10 ವರ್ಷಗಳ ಜೀವಿತಾವಧಿಯನ್ನು ಹೊಂದಿದೆ.

ಗುರುವಾರ ತನ್ನ 14ನೆಯ ಹಾರಾಟವನ್ನು ನಡೆಸಲಿರುವ 51.7 ಮೀ.ಎತ್ತರದ ಉಡಾವಣಾ ವಾಹನ ಜಿಎಸ್ಎಲ್ವಿ-ಎಫ್10 ಇಒಎಸ್-03 ಉಪಗ್ರಹವನ್ನು ಭೂ ಸಮಕಾಲಿಕ ಕಕ್ಷೆಗೆ ಸೇರಿಸುತ್ತದೆ ಮತ್ತು ನಂತರ ಉಪಗ್ರಹವು ತನ್ನಲ್ಲಿನ ಮುನ್ನೂಕುವಿಕೆ ವ್ಯವಸ್ಥೆಯನ್ನು ಬಳಸಿಕೊಂಡು ಅಂತಿಮ ಭೂಸ್ಥಿರ ಕಕ್ಷೆಯನ್ನು ತಲುಪುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News