×
Ad

ಫಾ.ಆಲ್ಫ್ರೆಡ್ ರೋಚ್ ಉಡುಪಿ ಧರ್ಮಪ್ರಾಂತ್ಯದ ಪ್ರಥಮ ದೇವರ ಸೇವಕ

Update: 2021-08-11 21:04 IST

ಉಡುಪಿ, ಆ.11: ಬ್ರಹ್ಮಾವರ ಹೋಲಿ ಫ್ಯಾಮಿಲಿ ಚರ್ಚ್‌ನ ಮೊದಲ ಕ್ಯಾಪುಚಿನ್ ಧರ್ಮಗುರುಗಳಾಗಿದ್ದ ಪವಿತ್ರ ಪಾದ್ರಿ ಫಾ.ಆಲ್ಫ್ರೆಡ್ ರೋಚ್ ಅವರನ್ನು ಉಡುಪಿ ಧರ್ಮಪ್ರಾಂತ್ಯದ ಪ್ರಥಮ ದೇವರ ಸೇವಕನೆಂದು ಆ.15 ರಂದು ಘೋಷಣೆ ಮಾಡಲಾಗುತ್ತದೆ.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯ ಅತಿ ವಂ.ಜೆರಾಲ್ಡ್ ಐಸಾಕ್ ಲೋಬೋ ಬ್ರಹ್ಮಾವರ ಹೋಲಿ ಫ್ಯಾಮಿಲಿ ಚರ್ಚ್‌ನಲ್ಲಿ ಆ.15ರಂದು ಬೆಳಿಗ್ಗೆ 8 ಗಂಟೆಗೆ ಅರ್ಪಿಸಲಿರುವ ಸಂಭ್ರಮದ ಬಲಿಪೂಜೆಯಲ್ಲಿ ಫಾ.ಆಲ್ಫ್ರೆಡ್ ರೋಚ್‌ರನ್ನು ದೇವರ ಸೇವಕನಾಗಿ ಘೋಷಿಸಲಿದ್ದಾರೆ. ಈ ಮೂಲಕ ಇವರು ಹೊಸದಾಗಿ ರಚನೆಯಾದ ಉಡುಪಿ ಧರ್ಮಪ್ರಾಂತ್ಯದ ದೇವರ ಸೇವಕರಾಗಿ ಘೋಷಿಸಲ್ಪಡುವ ಮೊದಲ ವ್ಯಕ್ತಿಯಾಗಲಿದ್ದಾರೆ. ದೇವರ ಸೇವಕ ಎಂಬ ಘೋಷಣೆಯು ಕ್ರೈಸ್ತ ಧರ್ಮದಲ್ಲಿ ಓರ್ವ ವ್ಯಕ್ತಿಯನ್ನು ಸಂತ ಎಂು ಘೋಷಿಸುವ ಮೊದಲ ಹೆಜ್ಜೆಯಾಗಿದೆ.

ಫಾ.ಆಲ್ಫ್ರೆಡ್ ರೋಚ್ 1924ರ ಎ.3ರಂದು ಬಾರಕೂರು ಮೂಡುಹಡು ವಿನಲ್ಲಿರುವ ಸೈಂಟ್ ಪೀಟರ್ಸ್ ಚರ್ಚ್‌ನಲ್ಲಿ ಜನಿಸಿದರು. ಇವರ ಬ್ಯಾಪ್ಟಿಸಮ್ನ ಹೆಸರು ಪೀಟರ್ ಜಾನ್ ರೋಚ್ ಎಂದು ಆಗಿತ್ತು. ತಮ್ಮ ಪ್ರಾಥಮಿಕ ಮತ್ತು ಪ್ರೌಡಶಾಲಾ ಶಿಕ್ಷಣವನ್ನು ಮೂಡಹಡು, ಸಾಸ್ತಾನ ಮತ್ತು ಮಿಲಾಗ್ರಿಸ್ ಕಲ್ಯಾಣಪುರದಲ್ಲಿ ಪೂರ್ಣಗೊಳಿಸಿದ ನಂತರ, ಅವರು 1944 ರಲ್ಲಿ ಕಾಪುಚಿನ್ಸ್ ಸಭೆಯನ್ನು ಸೇರಿದರು. ಇಲ್ಲಿ ತಮ್ಮ ಹೆಸರನ್ನು ಅವರು ಆಲ್ಫ್ರೆಡ್ ಎಂದು ಬದಲಾಯಿಸಿಕೊಂಡರು. 1951ರ ಎ.11ರಂದು ಇವರಿಗೆ ಕೋಟಗಿರಿ ಯಲ್ಲಿ ಯಾಜಕೀ ದೀಕ್ಷೆ ಲಭಿಸಿತು.

ಫರಂಗಿಪೇಟೆಯ ಮಾಂಟೆ ಮರಿಯಾನೊನಲ್ಲಿ ತನ್ನ ಆರಂಭಿಕ ಪೌರೋಹಿತ್ಯ ದಿನಗಳನ್ನು ನವಶಿಷ್ಯರಾಗಿ ಕಳೆದ ನಂತರ ಇವರು, 1956ರಲ್ಲಿ ಬ್ರಹ್ಮಾವರದ ಹೊಲಿ ಫ್ಯಾಮಿಲಿ ಚರ್ಚ್‌ನ ಮೊದಲ ಕಾಪುಚಿನ್ ಪಾದ್ರಿ ಆಗಿ ಅಧಿಕಾರ ವಹಿಸಿಕೊಂಡರು. ಅವರು ನಿವೃತ್ತಿಯ ನಂತರ 90ರ ದಶಕದ ಮಧ್ಯದಲ್ಲಿ ಮತ್ತೆ ಬ್ರಹ್ಮಾವರಕ್ಕೆ ಬಂದರು. 1996ರ ಡಿ.31ರಂದು ಅವರ ಮರಣದ ನಂತರ ಅವರನ್ನು ಇಲ್ಲಿಯೇ ಸಮಾಧಿ ಮಾಡಲಾಯಿತು.

ಮಂಗಳೂರು ಡಯಾಸಿಸ್‌ನ ಮಾಜಿ ವಿಕಾರ್ ಜನರಲ್ ಮತ್ತು ಬೆಥನಿಯ ಲಿಟರ್ ಫ್ಲವರ್ ಸಹೋದರಿಯ ಸಭೆಯ ಸ್ಥಾಪಕ ಮೊನ್ಸಿಂಜರ್ ರೇಮಂಡ್ ಫ್ರಾನ್ಸಿಸ್ ಕ್ಯಾಮಿಲ್ಲಸ್ ಮಸ್ಕರೇನ್ಹಸ್, ಅವರ ಬಳಿಕ ಈ ಗೌರವಕ್ಕೆ ಪಾತ್ರರಾದ ಕರ್ನಾಟಕ ಮೂಲದ ಎರಡನೇ ವ್ಯಕ್ತಿ ಫಾ.ಆಲ್ಪ್ರೆಡ್ ರೋಚ್. ಮೊನ್ಸಿಂಜರ್ ರೇಮಂಡ್ರನ್ನು 2008ರಲ್ಲಿ ದೇವರ ಸೇವಕನೆಂದು ಘೋಷಿಸಲಾಗಿತ್ತು. ಉಡುಪಿ ಧರ್ಮಪ್ರಾಂತ್ಯ ಸ್ಥಾಪನೆಯಾದ ಅತಿ ಅಲ್ಪಾವಧಿಯಲ್ಲಿ ಇಂತಹ ಗೌರವ ಪಾತ್ರವಾಗಿರುವುದು ಧರ್ಮಪ್ರಾಂತ್ಯದ ಮತ್ತೊಂದು ವಿಶಿಷ್ಟತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News