ಖಾಸಗಿ ಬಸ್ ದರ ಏರಿಕೆ ವಿರುದ್ಧ ಸರ್ವಪಕ್ಷ, ಸಂಘಟನೆಗಳ ಒಕ್ಕೂಟ ರಚನೆ
ಮಂಗಳೂರು, ಆ.11: ದ.ಕ. ಜಿಲ್ಲೆಯ ಖಾಸಗಿ ಬಸ್‌ಗಳ ಪ್ರಯಾಣ ದರ ಏರಿಕೆ ವಿರುದ್ಧ ಹೋರಾಟಕ್ಕೆ ಇದೀಗ ಕಾಂಗ್ರೆಸ್, ಸಿಪಿಎಂ, ಸಿಪಿಐ, ಜೆಡಿಎಸ್ ಸೇರಿದಂತೆ ವಿದ್ಯಾರ್ಥಿ, ಯುವಜನ, ಮಹಿಳಾ, ದಲಿತ ಸಂಘಟನೆಗಳನ್ನೊಂಡ ಒಕ್ಕೂಟ ರಚನೆಯಾಗಿದೆ.
ದರ ಏರಿಕೆಯನ್ನು ತಡೆಹಿಡಿದು ಕೂಡಲೇ ಸಾರಿಗೆ ಪ್ರಾಧಿಕಾರದ ಸಭೆ ಕರೆಯಬೇಕು. ಇಲ್ಲದಿದ್ದರೆ ಈ ಎಲ್ಲ ಪಕ್ಷಗಳೊಂದಿಗೆ ಜಿಲ್ಲೆಯಾದ್ಯಂತ ವ್ಯಾಪಕ ಪ್ರತಿಭಟನೆ, ರಸ್ತೆ ತಡೆ ಚಳವಳಿ, ಕರಪತ್ರ ಹಂಚಿಕೆ, ಮನೆ ಮನೆ ಪ್ರಚಾರ ಸೇರಿದಂತೆ ಐಕ್ಯ ಹೋರಾಟ ನಡೆಸಲಾಗುವುದು ಎಂದು ಒಕ್ಕೂಟ ಎಚ್ಚರಿಸಿದೆ.
ನಗರದ ವುಡ್‌ಲ್ಯಾಂಡ್ ಹೋಟೆಲ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್, ಖಾಸಗಿ ಬಸ್ ದರ ಏರಿಕೆ ಮಾಡಬೇಕಾದರೆ ಸಾರಿಗೆ ಪ್ರಾಧಿಕಾರದ ಸಭೆ ಕರೆದು, ಸಾರ್ವಜನಿಕರ ಅಹವಾಲು ಆಲಿಸಿ ನಂತರ ನಿಗದಿಗೊಳಿಸುವುದು ನಿಯಮ. ಆದರೆ ಇದ್ಯಾವ ಪ್ರಕ್ರಿಯೆಗಳನ್ನೂ ನಡೆಸದೆ ಜಿಲ್ಲಾಡಳಿತ ಏಕಾಏಕಿ ದರ ಏರಿಕೆ ಮಾಡಿ ಆದೇಶ ಹೊರಡಿಸಿದೆ ಎಂದರು.
ಒಂದರಿಂದ ಮೂರನೇ ಸ್ಟೇಜ್‌ವರೆಗೆ ಕಡಿಮೆ ದರ ನಿಗದಿ ಮಾಡಲಾಗುತ್ತಿತ್ತು. ಆದರೆ ಈ ಬಾರಿ 3ರೊಳಗಿನ ಸ್ಟೇಜ್‌ನಲ್ಲೇ ವಿಪರೀತ ದರ ಏರಿಕೆ ಮಾಡಲಾಗಿದೆ. ಗ್ರಾಮಾಂತರ ಸಾರಿಗೆಯಲ್ಲಿ 4 ಕಿ.ಮೀ.ವರೆಗಿನ ಪ್ರಥಮ ಸ್ಟೇಜ್‌ನ್ನು 2 ಕಿ.ಮೀ.ಗೆ ಇಳಿಸಿದ್ದು ಖಂಡನೀಯ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಬಸ್ ಮಾಲಕರು ಶೇ.25ರಷ್ಟು ದರ ಹೆಚ್ಚಳ ಮಾಡಿತ್ತು. ಈ ಬಾರಿ ಜಿಲ್ಲಾಡಳಿತ ಪುನಃ ಶೇ.25ರಷ್ಟು ದರವನ್ನು ಅವೈಜ್ಞಾನಿಕವಾಗಿ ಏರಿಕೆ ಮಾಡಿದೆ. ಇದರಿಂದ ಶೇ.50ರಷ್ಟು ದರ ಏರಿಕೆಯಾದಂತಾಗಿದೆ. ಕಳೆದ ಎರಡು ವರ್ಷಗಳಿಂದ ಕೊರೋನಾದಿಂದ ಉದ್ಯೋಗ ಕಡಿತ, ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕಾಗಿ ಪರಿತಪಿಸುವಾಗ ಜಿಲ್ಲೆಯ ಲಕ್ಷಾಂತರ ಜನರನ್ನು ಸಂಕಷ್ಟಕ್ಕೆ ದೂಡಲಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶುಭೋದಯ ಆಳ್ವ ಮಾತನಾಡಿ, ಹಿಂದೆ ಶೇ.5, 7, 10ರಷ್ಟು ದರ ಏರಿಕೆ ಆಗುತ್ತಿತ್ತು. ಈಗ ದಿಡೀರ್ ಶೇ.50ಕ್ಕಿಂತಲೂ ಹೆಚ್ಚು ದರ ಏರಿಕೆ ಮಾಡಿರುವುದನ್ನು ತಕ್ಷಣ ವಾಪಸ್ ಪಡೆಯದಿದ್ದರೆ ವಾರದೊಳಗೆ ಬೃಹತ್ ಹೋರಾಟ ನಡೆಸಲು ಸಿದ್ಧರಾಗಿ ದ್ದೇವೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನೀರಜ್‌ಪಾಲ್, ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ಜೆಡಿಎಸ್ ಮುಖಂಡೆ ಸುಮತಿ ಹೆಗ್ಡೆ, ಸಿಪಿಐನ ಎಚ್.ವಿ. ರಾವ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ಎಂ. ದೇವದಾಸ್, ದಲಿತ ಹಕ್ಕುಗಳ ಸಮಿತಿಯ ತಿಮ್ಮಯ್ಯ ಕೊಂಚಾಡಿ, ಜೆಡಿಎಸ್ ಮುಖಂಡ ಅಲ್ತಾಫ್ ತುಂಬೆ ಇದ್ದರು.