ತಾಲಿಬಾನ್ ಗೆ ಶರಣಾದ ನೂರಾರು ಸೈನಿಕರು: ಸೈನಿಕರನ್ನು ಬೆಂಬಲಿಸಲು ಮಝಾರಿ ಶರೀಫ್ ಗೆ ಹೋದ ಅಫ್ಘಾನ್ ಅಧ್ಯಕ್ಷ
ಕಾಬೂಲ್ (ಅಫ್ಘಾನಿಸ್ತಾನ), ಆ. 11: ತಾಲಿಬಾನ್ ಉಗ್ರರಿಂದ ಮುತ್ತಿಗೆಗೆ ಒಳಗಾಗಿರುವ ಉತ್ತರ ಭಾಗದ ನಗರ ಮಝಾರಿ ಶರೀಫ್ ಗೆ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಬುಧವಾರ ಭೇಟಿ ನೀಡಿ ಸೈನಿಕರಿಗೆ ಧೈರ್ಯ ತುಂಬಿದರು. ಆದರೆ ಅವರು ಭೇಟಿ ನೀಡಿದ ಸ್ವಲ್ಪವೇ ಹೊತ್ತಿನಲ್ಲಿ ಸಮೀಪದ ಕುಂಡುಝ್ನಲ್ಲಿ ನೂರಾರು ಅಫ್ಘಾನ್ ಸೈನಿಕರು ತಾಲಿಬಾನಿಗಳಿಗೆ ಶರಣಾಗಿದ್ದಾರೆ.
ತಾಲಿಬಾನಿಗಳು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಕಾಲು ಭಾಗಕ್ಕೂ ಅಧಿಕ ಪ್ರಾಂತೀಯ ರಾಜಧಾನಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಮಂಗಳವಾರ ರಾತ್ರಿ ಉಗ್ರರು ಕುಂಡುಝ್ ನಗರವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಇದು ಕಳೆದ ಶುಕ್ರವಾರದ ಬಳಿಕ ಭಯೋತ್ಪಾದಕರು ವಶಕ್ಕೆ ಪಡೆದುಕೊಂಡಿರುವ ಒಂಭತ್ತನೇ ನಗರವಾಗಿದೆ.
ಮಝಾರಿ ಶರೀಫ್ ನಲ್ಲಿ ಅಶ್ರಫ್ ಘನಿ ಸ್ಥಳೀಯ ಬಲಾಢ್ಯ ಅಟ್ಟಾ ಮುಹಮ್ಮದ್ ನೂರ್ ಮತ್ತು ಕುಖ್ಯಾತ ಪಾಳೇಗಾರ ಅಬ್ದುಲ್ ರಶೀದ್ ದೋಸ್ತಮ್ ಜೊತೆ ನಗರದ ರಕ್ಷಣೆಯ ಬಗ್ಗೆ ಮಾತುಕತೆ ನಡೆಸಿದರು.
ಈ ನಗರವನ್ನು ತಾಲಿಬಾನಿಗಳು ಸುತ್ತುವರಿದಿದ್ದು, ಅದು ಉಗ್ರರ ಕೈವಶವಾದರೆ ಕಾಬೂಲ್ ಸರಕಾರಕ್ಕೆ ದೊಡ್ಡ ಹೊಡೆತವಾಗಲಿದೆ ಹಾಗೂ ಅದು ಉತ್ತರದ ಭಾಗದ ಮೇಲಿನ ನಿಯಂತ್ರಣವನ್ನು ಸಂಪೂರ್ಣವಾಗಿ ಕಳೆದುಕೊಳ್ಳಲಿದೆ. ಇದು ಸುದೀರ್ಘ ಕಾಲದಿಂದಲೂ ತಾಲಿಬಾನ್ ವಿರೋಧಿ ಖಾಸಗಿ ಶಸ್ತ್ರಧಾರಿ ಗುಂಪುಗಳ ಆಡುಂಬೊಲವಾಗಿದೆ.
ತಾವು ಕುಂಡುಝ್ ವಿಮಾನ ನಿಲ್ದಾಣದಲ್ಲಿ ಆಘಾತಕಾರಿ ಮೋರ್ಟರ್ ದಾಳಿಗಳನ್ನು ಎದುರಿಸಿದೆವು; ಹಾಗಾಗಿ ಶರಣಾಗುವುದನ್ನು ಹೊರತುಪಡಿಸಿ ಬೇರೆ ಆಯ್ಕೆಯೇ ಇರಲಿಲ್ಲ ಎಂದು ಸೇನಾಧಿಕಾರಿಯೊಬ್ಬರು ಎಎಫ್ಪಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.
‘‘ಅಲ್ಲಿ ಪ್ರತಿ ಹೋರಾಟಕ್ಕೆ ಅವಕಾಶವೇ ಇರಲಿಲ್ಲ’’ ಎಂದರು. ‘‘20 ಸೈನಿಕರು, ಮೂರು ಹಮ್ವೀ ವಾಹನಗಳು ಮತ್ತು ನಾಲ್ಕು ಪಿಕ್-ಅಪ್ ಟ್ರಕ್ಗಳನ್ನು ಒಳಗೊಂಡ ನನ್ನ ಸೇನಾ ಘಟಕ ಈಗಷ್ಟೇ ಶರಣಾಗಿದೆ. ನಾವೆಲ್ಲರೂ ಈಗ ಕ್ಷಮಾದಾನ ಪತ್ರಗಳನ್ನು ಸ್ವೀಕರಿಸಲು ಕಾಯುತ್ತಿದ್ದೇವೆ. ಇದಕ್ಕಾಗಿ ದೊಡ್ಡ ಸರದಿಯೇ ಇದೆ’’ ಎಂದು ಅವರು ನುಡಿದರು.
ಇನ್ನೊಂದು ಪ್ರಾಂತೀಯ ರಾಜಧಾನಿ ತಾಲಿಬಾನ್ ವಶಕ್ಕೆ
ಉತ್ತರ ಅಫ್ಘಾನಿಸ್ತಾನದ ಫೈಝಾಬಾದ್ ನಗರವನ್ನು ತಾಲಿಬಾನ್ ವಶಪಡಿಸಿಕೊಂಡಿದೆ ಎಂದು ಸ್ಥಳೀಯ ಸಂಸದ ಝಬೀಯುಲ್ಲಾ ಆತಿಕ್ ಎಎಫ್ಪಿ ಸುದ್ದಿ ಸಂಸ್ಥೆಗೆ ಬುಧವಾರ ಹೇಳಿದ್ದಾರೆ.
‘‘ಕಳೆದ ಹಲವಾರು ದಿನಗಳಿಂದ ತಾಲಿಬಾನ್ ವಿರುದ್ಧ ಹೋರಾಡುತ್ತಿದ್ದ ಭದ್ರತಾ ಪಡೆಗಳು ಭಾರೀ ಒತ್ತಡಕ್ಕೆ ಒಳಗಾದವು. ಈಗ ತಾಲಿಬಾನ್ ನಗರವನ್ನು ವಶಪಡಿಸಿಕೊಂಡಿದೆ. ಉಭಯ ಕಡೆಗಳಲ್ಲೂ ಭಾರೀ ಸಾವು-ನೋವುಗಳಾಗಿವೆ’’ ಎಂದು ಅವರು ಹೇಳಿದರು.