ಇಸ್ರೇಲ್ ವಿದೇಶ ಸಚಿವ ಲ್ಯಾಪಿಡ್ ಮೊರಾಕ್ಕೊಗೆ ಆಗಮನ; ಮಹತ್ವದ ಮಾತುಕತೆ

Update: 2021-08-11 17:27 GMT

ಜೆರುಸಲೇಂ,ಆ.11: ಇಸ್ರೇಲಿನ ವಿದೇಶಾಂಗ ಸಚಿವ ಯಾಯಿರ್ ಲ್ಯಾಪಿಡ್ ಅವರು ಬುಧವಾರ ಮೊರಕ್ಕೊಗೆ ಆಗಮಿಸಿದ್ದು, ಉಭಯದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಇಸ್ರೇಲ್ ಹಾಗೂ ಮೊರಕ್ಕೊ ನಡುವೆ ಕಳೆದ ವರ್ಷ ರಾಜತಾಂತ್ರಿಕ ಬಾಂಧವ್ಯ ಸುಧಾರಣೆಯಾದ ಇಸ್ರೇಲ್ನ ರಾಜತಾಂತ್ರಿಕರೊಬ್ಬರು ಮೊರಾಕ್ಕೊಗೆ ನೀಡಿದ ಪ್ರಪ್ರಥಮ ಭೇಟಿ ಇದಾಗಿದೆ.
   
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿದ್ದಾಗ ಅವರ ಮಧ್ಯಸ್ಥಿಕೆಯಲ್ಲಿ ಏರ್ಪಟ್ಟ ಒಪ್ಪಂದವೊಂದರಲ್ಲಿ ರಾಜತಾಂತ್ರಿಕ ಬಾಂಧವ್ಯಗಳನ್ನು ಪುನಾರಂಭಿಸಲು ಹಾಗೂ ಉಭಯದೇಶಗಳ ನಡುವೆ ನೇರ ವಾಯುಯಾನ ಸೌಲಭ್ಯವನ್ನು ಮರಳಿ ಸ್ಥಾಪಿಸಲು ಇಸ್ರೇಲ್ ಹಾಗೂ ಮೊರಕ್ಕೊ ಸಮ್ಮತಿಸಿದ್ದವು.
  
ಮೊರಾಕ್ಕೊಗೆ ಆಗಮಿಸಿರುವ ಇಸ್ರೇಲ್ ಸಚಿವಾಂಗ ನಿಯೋಗದ ನೇತೃತ್ವ ವಹಿಸಿರುವ ಲ್ಯಾಪಿಡ್ ಅವರು ರಬ್ಬತ್ ನಗರದಲ್ಲಿ ಇಸ್ರೇಲ್ ರಾಯಭಾರಿ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಅಲ್ಲದೆ ಕ್ಯಾಸಬ್ಲಾಂಕಾದ ಐತಿಹಾಸಿಕ ಬೆಥೆಲ್ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಮೊರಾಕ್ಕೊದ ವಿದೇಶಾಂಗ ಸಚಿವ ನಾಸೆರ್ ಬೌರಿಟಾ ಜೊತೆ ಮಾತುಕತೆಗಳನ್ನು ನಡೆಸಲಿದ್ದಾರೆಂದು ಲ್ಯಾಪಿಡ್ ಅವರ ಕಚೇರಿ ತಿಳಿಸಿದೆ.
  
ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ ಶಾಂತಿ ಒಪ್ಪಂದಗಳ ಅಡಿಯಲ್ಲಿಸ್ರೇಲ್ ಜೊತೆಗಿನ ಬಾಂಧವ್ಯಳನ್ನು ಸಹಜಗೊಳಿಸಲು ಯುಎಇ, ಬಹರೈನ್ ಹಾಗೂ ಸುಡಾನ್ ಅಲ್ಲದೆ ಮೊರಕ್ಕೊ ಕೂಡಾ ಮುಂದೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News