×
Ad

ಅಮೆರಿಕ-ದ.ಕೊರಿಯ ಸಮರಾಭ್ಯಾಸದಿಂದ ಭದ್ರತಾ ಬಿಕ್ಕಟ್ಟು: ಉ.ಕೊರಿಯ ಎಚ್ಚರಿಕೆ

Update: 2021-08-11 23:00 IST

ಸಿಯೋಲ್,ಆ.11: ತನ್ನೊಂದಿಗೆ ಬಾಂಧವ್ಯಗಳನ್ನು ಸುಧಾರಣೆಗೊಳಿಸುವ ಅವಕಾಶವನ್ನು ದಕ್ಷಿಣ ಕೊರಿಯ ಹಾಗೂ ಅಮೆರಿಕ ಕಳೆದುಕೊಂಡಿವೆಯೆಂದು ಉತ್ತರ ಕೊರಿಯ ಬುಧವಾರ ಅಸಮಾಧಾನ ವ್ಯಕ್ತಪಡಿಸಿದೆೆ ಹಾಗೂ ಜಂಟಿ ಸಮರಾಭ್ಯಾಸವನ್ನು ಆಯೋಜಿಸುವ ಮೂಲಕ ಉದ್ವಿಗ್ನತೆಯ ಉಲ್ಬಣಕ್ಕೆ ಅವು ಅವಕಾಶ ಮಾಡಿಕೊಟ್ಟಿದ್ದು, ಗಂಭೀರವಾದ ಭದ್ರತಾ ಬಿಕ್ಕಟ್ಟಿನ ಅಪಾಯವನ್ನು ತಂದೊಡ್ಡಿವೆ ಎಂದು ಅದು ಎಚ್ಚರಿಕೆ ನೀಡಿದೆ.

  
ಯೊಂಗ್ಯಾಂಗ್ನ ಸದ್ಭಾವನೆಗೆ, ಅಮೆರಿಕ ಹಾಗೂ ದಕ್ಷಿಣ ಕೊರಿಯಗಳು ದ್ವೇಷದ ಕೃತ್ಯಗಳ ಮೂಲಕ ಉತ್ತರ ನೀಡಿದೆಯೆಂದು ಉತ್ತರ ಕೊರಿಯದ ಸೇನಾ ಜನರಲ್ ಹಾಗೂ ರಾಜಕಾರಣಿಯಾದ ಕಿಮ್ ಯೊಂಗ್ ಚೊಲ್ ತಿಳಿಸಿದ್ದಾರೆ.

ಕಿಮ್ ಜೊಂಗ್ ಉನ್ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ನಡೆದ ಐತಿಹಾಸಿಕ ಶೃಂಗಸಭೆಯಲ್ಲಿ ಕಿಮ್ ಯೊಂಗ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಉತ್ತರ ಕೊರಿಯ ನಾಯಕ ಕಿಮ್ ಜೊಂಗ್ ಉನ್ ಅವರ ಪ್ರಭಾವಿ ಸಹೋದರಿ ಕಿಮ್ ಯೊ ಜೊಂಗ್ ಉನ್ ಅವರು ಈ ವಾರ ಆರಂಗೊಳ್ಳಲಿರುವ ದಕ್ಷಿಣ ಕೊರಿಯ ಹಾಗೂ ಕೆನಡ ಜಂಟಿ ಸಮರಾಭ್ಯಾಸವನ್ನು ಖಂಡಿಸಿದ ಮರುದಿನವೇ ಯೊಂಗ್ ಈ ಹೇಳಿಕೆ ನೀಡಿದಾರೆ.
ಈ ಮಧ್ಯೆ ದಕ್ಷಿಣ ಕೊರಿಯವು ಹೇಳಿಕೆಯೊಂದನ್ನು ನೀಡಿ, ಹಾಟ್ಲೈನ್ ಮೂಲಕ ತಾನು ಮಾಡಿದ ವಾಡಿಕೆಯ ಕರೆಗಳಿಗೆ ಉತ್ತರ ಕೊರಿಯ ಉತ್ತರಿಸಿಲ್ಲೆಂದು ತಿಳಿಸಿದರು.
   
ಉಭಯ ಕೊರಿಯಗಳ ನಡುವೆ ಉದ್ವಿಗ್ನತೆ ಉಲ್ಪಣಿಸಿದ ಹಿನ್ನೆಲೆಯಲ್ಲಿ ಉಭಯದೇಶಗಳ ಹಾಟ್ಲೈನ್ ಸಂಪರ್ಕವನ್ನು ಉತ್ತರ ಕೊರಿಯ ಕಳೆದ ವರ್ಷ ಕಡಿತಗೊಳಿಸಿತ್ತು. ಈ ವರ್ಷದ ಜುಲೈ ತಿಂಗಳಲ್ಲಿ ಅದನ್ನು ಮರುಸ್ಥಾಪಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News