×
Ad

ಅಂಚೆ ಕಚೇರಿಗಳಲ್ಲಿ ಆಧಾರ್ ಸೇವೆ ಲಭ್ಯ

Update: 2021-08-12 17:52 IST

ಮಂಗಳೂರು, ಆ.12: ಮಂಗಳೂರು ಅಂಚೆ ವಿಭಾಗದ 2 ಪ್ರಧಾನ ಅಂಚೆ ಕಚೇರಿ ಹಾಗೂ 37 ಉಪ ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿ ಮತ್ತು ಪರಿಷ್ಕರಣೆ ಸೇವೆಗಳು ಲಭ್ಯವಿವೆ.

ಅಂಚೆ ಕಚೇರಿಗಳಲ್ಲಿ ಅಂಚೆಅಣ್ಣನ ಮೂಲಕ ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆ ಜೋಡಣೆ ಸೇವೆಯೂ ಲಭ್ಯವಿದೆ. ಆದರೆ ಕೆಲವೊಂದು ಕಚೇರಿಗಳ ಸಮೀಪ ಮಧ್ಯವರ್ತಿಗಳು ಜನರಿಂದ ಹಣ ಪಡೆದು ವಂಚಿಸುತ್ತಿದ್ದಾರೆ ಎಂದು ದೂರು ಬಂದಿದೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಿರಬೇಕು. ಆಧಾರ್ ಸಹಿತ ಇತರ ಅಂಚೆ ಸೇವೆ ನೀಡಲು ಯಾವುದೇ ಮಧ್ಯವರ್ತಿಗಳಿಗೆ ಅವಕಾಶವಿಲ್ಲ ಎಂದು ಅಂಚೆ ಅಧೀಕ್ಷಕರು ಸ್ಪಷ್ಟಪಡಿಸಿದ್ದಾರೆ.

ಅಂಚೆ ಕಚೇರಿಗಳಲ್ಲಿ ಹೊಸ ನೋಂದಣಿ (ಉಚಿತ), 5ರಿಂದ 15 ವರ್ಷದೊಳಗಿನ ಮಕ್ಕಳ ಕಡ್ಡಾಯ ಬಯೋಮೆಟ್ರಿಕ್ ಅಪ್‌ಡೇಟ್ (ಉಚಿತ), ಬಯೋಮೆಟ್ರಿಕ್ ಅಪ್‌ಡೇಟ್ (5ರಿಂದ 15 ವರ್ಷದ ಮಕ್ಕಳನ್ನು ಹೊರತು ಪಡಿಸಿ) ರೂ.100, ಹೆಸರು, ವಿಳಾಸ, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ,ಇಮೇಲ್ ಐಡಿ ತಿದ್ದುಪಡಿಗೆ ರೂ.50 ಶುಲ್ಕ ವಿಧಿಸಲಾಗಿದೆ.

ಇದನ್ನು ಬಿಟ್ಟು ಬೇರೆ ಯಾವುದೇ ಹಣ/ಶುಲ್ಕವನ್ನು ಯಾರಿಗೂ ಗ್ರಾಹಕರು ನೀಡಬಾರದು. ಅಂಚೆ ಕಚೇರಿಯಲ್ಲಿ ಪಡೆಯುವ ನಿಗದಿತ ಶುಲ್ಕವು ಸ್ವೀಕೃತಿ ಪತ್ರದಲ್ಲೇ ನಮೂದಾಗಿರುತ್ತದೆ. ಯಾವುದೇ ಅಂಚೆ ಕಚೇರಿಗಳ ಸಮೀಪ/ಆವರಣ ಮಧ್ಯವರ್ತಿಗಳು ಕಂಡು ಬಂದಲ್ಲಿ ವಾ.ಸಂ: 9448291072. ಅಥವಾ domangalore.ka@indiapost.gov.in ದೂರು ನೀಡಬಹುದು ಎಂದು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News