ಮಗಳು ಅಳುತ್ತಿರುವಂತೆಯೇ ವ್ಯಕ್ತಿಯ ಮೇಲೆ ಹಲ್ಲೆಗೈದು ʼಜೈ ಶ್ರೀರಾಂʼ ಹೇಳಿಸಿದ ದುಷ್ಕರ್ಮಿಗಳು

Update: 2021-08-12 13:19 GMT
screengrap/twitter

ಕಾನ್ಪುರ: 45 ವರ್ಷದ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಯೋರ್ವನ ಮೇಲೆ ಹಲ್ಲೆಗೈದು ಬೀದಿಯಲ್ಲಿ ಮೆರವಣಿಗೆ ಮಾಡಿಸಿ ಜೈಶ್ರೀರಾಮ್‌ ಹೇಳಿಸಿದ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಆತನಿಗೆ ಅಂಟಿಕೊಂಡೇ ಆತನ ಪುಟ್ಟ ಮಗಳು ಅಳುತ್ತಿರುವಂತೆಯೇ ದುಷ್ಕರ್ಮಿಗಳು ಥಳಿಸುತ್ತಿರುವ ದೃಶ್ಯ ವೈರಲ್‌ ಆಗಿದೆ.

ತನ್ನ ತಂದೆಯನ್ನು ಉಳಿಸುವಂತೆ ಪುಟ್ಟ ಮಗಳು ಬೇಡುತ್ತಿರುವ ನಡುವೆಯೇ ದುಷ್ಕರ್ಮಿಗಳು ಥಳಿಸುತ್ತಿರುವುದು ಮತ್ತು ಪೊಲೀಸರ ಸಮ್ಮುಖದಲ್ಲಿಯೇ ಹಲ್ಲೆ ನಡೆಸಿ ಪೊಲೀಸರಿಗೆ ಹಸ್ತಾಂತರಿಸುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. 

ಸಂಘಪರಿವಾರ ಸಂಘಟನೆ ಬಜರಂಗದಳ ಸಭೆ ನಡೆಸಿದ ಪ್ರದೇಶದಿಂದ 500 ಮೀಟರ್‌ ದೂರದಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಮುಸ್ಲಿಮರು ಹಿಂದೂಗಳನ್ನು ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ ಎಂದು ಬಜರಂಗದಳ ಸದಸ್ಯರು ಸಭೆಯಲ್ಲಿ ಆರೋಪಿಸಿದ್ದು, ಸಭೆಯ ಬಳಿಕ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ನಿರ್ದಿಷ್ಠ ಸಂಘಟನೆಯವರು ಹಲ್ಲೆ ನಡೆಸಿದ ಕುರಿತು ಪೊಲೀಸರು ಅಧಿಕೃತ ಹೇಳಿಕೆ ನೀಡಿಲ್ಲ ಎಂದು ವರದಿ ತಿಳಿಸಿದೆ.

ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ವ್ಯಕ್ತಿಯ ಹೇಳಿಕೆಯ ಮೇರೆಗೆ ಸ್ಥಳೀಯ ವ್ಯಕ್ತಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ನಾನು ಮಧ್ಯಾಹ್ನ 3 ಗಂಟೆ ಸುಮಾರಿಗೆ ನನ್ನ ಇ-ರಿಕ್ಷಾವನ್ನು ಓಡಿಸುತ್ತಿದ್ದೆ, ಆಗ ಆರೋಪಿಗಳು ನನ್ನನ್ನು ಮತ್ತು ನನ್ನ ಕುಟುಂಬವನ್ನು ಕೊಲ್ಲುವ ಬೆದರಿಕೆಯೊಡ್ಡಲು ಮತ್ತು ನಿಂದಿಸಲು ಆರಂಭಿಸಿದರು. ಆದರೆ ಈಗ ಪೊಲೀಸರಿಂದಾಗಿ ನಾನು ರಕ್ಷಿಸಲ್ಪಟ್ಟಿದ್ದೇನೆ" ಎಂದು ಇ-ರಿಕ್ಷಾ ಚಾಲಕ ಹೇಳಿಕೆ ನೀಡಿದ್ದಾಗಿ ndtv.com ವರದಿ ಮಾಡಿದೆ.

ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ವಿಡಿಯೋವನ್ನು ನಾವು ನೋಡಿದ್ದೇವೆ. ಸಂತ್ರಸ್ತನ ದೂರಿನ ಆಧಾರದ ಮೇಲೆ ನಾವು ಎಫ್ಐಆರ್ ದಾಖಲಿಸಿದ್ದೇವೆ ಮತ್ತು ಕಾನೂನು ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ" ಎಂದು ಕಾನ್ಪುರದ ಹಿರಿಯ ಪೊಲೀಸ್ ಅಧಿಕಾರಿ ರವೀನಾ ತ್ಯಾಗಿ ಸಂಕ್ಷಿಪ್ತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News