ಯುರೋಪ್‌ನಲ್ಲೇ ಗರಿಷ್ಠ ತಾಪಮಾನ ಸಿಸಿಲಿಯಲ್ಲಿ ದಾಖಲು

Update: 2021-08-12 14:28 GMT

 ರೋಮ್, ಆ.12: ಇಟಲಿಯಲ್ಲಿ ಬುಧವಾರ ತಾಪಮಾನ 48.8 ಡಿಗ್ರಿಗೆಏರಿದ್ದು ಇದರಿಂದ ಬೀಸಿದ ಉಷ್ಣಗಾಳಿಯಿಂದ ಹಲವೆಡೆ ಕಾಡ್ಗಿಚ್ಚು ಹತ್ತಿಕೊಂಡಿದೆ. ಇದು ಯುರೋಪ್‌ನಲ್ಲಿ ದಾಖಲಾದ ಗರಿಷ್ಠ ತಾಪಮಾನವಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

  ಆಗ್ನೇಯ ಇಟಲಿಯ ದ್ವೀಪವಾದ ಸಿಸಿಲಿಯ ನಗರ ಸಿರಾಕೂಸ್‌ನಲ್ಲಿ ಬುಧವಾರ 48.8 ಡಿಗ್ರಿ ತಾಪಮಾನ ದಾಖಲಾಗಿದೆ. ಇದು ಯುರೋಪ್‌ನಲ್ಲೇ ಗರಿಷ್ಠ ತಾಪಮಾನವಾಗಿದೆ ಎಂದು ವಿಶ್ವ ಹವಾಮಾನ ಇಲಾಖೆ ಇನ್ನೂ ಇದನ್ನು ದೃಢೀಕರಿಸಿಲ್ಲ. ಈ ಹಿಂದೆ 1977ರ ಜುಲೈ 10ರಂದು ಅಥೆನ್ಸ್‌ನಲ್ಲಿ 48 ಡಿಗ್ರಿ ತಾಪಮಾನ ದಾಖಲಾಗಿತ್ತು ಎಂದು ಹವಾಮಾನ ತಜ್ಞ ಮ್ಯಾನುವೆಲ್ ಮರೊಲೇನಿ ಹೇಳಿದ್ದಾರೆ.

 ತಾಪಮಾನ ಹೆಚ್ಚಿರುವುದರಿಂದ ಉಷ್ಣಗಾಳಿ ಬೀಸುತ್ತಿದ್ದು ಸಿಸಿಲಿ ಹಾಗೂ ಕ್ಯಾಲಬ್ರಿಯಾದಲ್ಲಿ 500ಕ್ಕೂ ಹೆಚ್ಚು ಕಡೆ ಕಾಡ್ಗಿಚ್ಚು ಹತ್ತಿಕೊಂಡಿದೆ. 5 ವಿಮಾನಗಳ ಮೂಲಕ ನೀರನ್ನು ಸುರಿದು ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿದಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಕಳೆದ ವಾರದಿಂದ ಕಾಡ್ಗಿಚ್ಚಿನಿಂದ ಕನಿಷ್ಟ 4 ಮಂದಿ ಮೃತರಾಗಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ಹೇಳಿದೆ. ‘ದಕ್ಷಿಣ ಕ್ಯಾಲಬ್ರಿಯಾ ಪ್ರದೇಶದಲ್ಲಿ 77 ವರ್ಷದ ಕುರಿ ಕಾಯುವವನೊಬ್ಬ ಮೃತನಾಗಿದ್ದಾನೆ. ನಮ್ಮ ಇತಿಹಾಸ ಕಳೆದುಹೋಗುತ್ತಿದೆ. ನಮ್ಮ ಅಸ್ಮಿತೆ ಬೂದಿಯಾಗುತ್ತಿದೆ. ನಮ್ಮ ಆತ್ಮ ಉರಿಯುತ್ತಿದೆ’ ಎಂದು ರೆಗಿಯೊ ಕ್ಯಾಲಬ್ರಿಯಾದ ಮೇಯರ್ ಗ್ಯೂಸೆಪ್ ಫಲ್ಕೋಮಟ ಫೇಸ್‌ಬುಕ್‌ನಲ್ಲಿ ಉಲ್ಲೇಖಿಸಿದ್ದು, ಬಾಧಿತ ಪ್ರದೇಶದಿಂದ ದೂರ ತೆರಳುವಂತೆ ಜನರಿಗೆ ಮನವಿ ಮಾಡಿದ್ದಾರೆ. ‌
ಸಿಸಿಲಿಯ ಬಳಿ, ಕಾಡ್ಗಿಚ್ಚು ನಂದಿಸುವ ಕಾರ್ಯದಲ್ಲಿ ತೊಡಗಿದ್ದ 30 ವರ್ಷದ ರೈತನೊಬ್ಬ ಟ್ರ್ಯಾಕ್ಟರ್ ಪಲ್ಟಿಯಾಗಿ ಮೃತಪಟ್ಟಿದ್ದಾನೆ. ಹಲವಾರು ಮರಗಳು ಸುಟ್ಟುಹೋಗಿದ್ದು ಸಮೀಪದ ಜನವಸತಿ ಪ್ರದೇಶಕ್ಕೆ ಅಪಾಯ ಎದುರಾಗಿದೆ ಎಂದು ಸಿಸಿಲಿಯ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News