ದ.ಕ. ಜಿಲ್ಲೆಯಲ್ಲಿ ಆ.14,15ರಂದು ವಾರಾಂತ್ಯ ಕರ್ಫ್ಯೂ ಜಾರಿ

Update: 2021-08-13 13:57 GMT

ಮಂಗಳೂರು, ಆ.13: ಕೇರಳದಲ್ಲಿ ಕೊರೋನ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಕಾಣದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಕಳೆದ ವಾರ ವಿಧಿಸಿದಂತೆ ಈ ವಾರಾಂತ್ಯವೂ (ಆ.14,15) ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 5ರವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ. ಅಗತ್ಯ ವಸ್ತುಗಳ ಖರೀದಿಗೆ ಈ ಎರಡೂ ದಿನಗಳಲ್ಲಿ ಅಪರಾಹ್ನ 2ರವರೆಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಈ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿಸಬಹುದು. ಬಳಿಕ ಅನಗತ್ಯವಾಗಿ ತಿರುಗಾಡಬಾರದು ಎಂದು ತಿಳಿಸಿದ್ದಾರೆ.

ವಾರಾಂತ್ಯ ಕರ್ಫ್ಯೂ ವೇಳೆ ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವಿಲ್ಲ. ಅಲ್ಲದೆ ಶನಿವಾರ ನಡೆಸಲು ಉದ್ದೇಶಿಸಲಾಗಿದ್ದ ಮಂಗಳೂರು ವಿವಿ ಪದವಿ ಪರೀಕ್ಷೆಯನ್ನು ಕೂಡ ಮುಂದೂಡಲಾಗಿದೆ. ರವಿವಾರ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಲೋಕ್ ಅದಾಲತ್‌ಗೆ ವಾರಾಂತ್ಯ ಕರ್ಫ್ಯೂ ವಿನಾಯಿತಿ

ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಹಲವು ಕ್ರಮಗಳನ್ನು ಕೈಗೊಂಡಿದ್ದು, ಹಲವು ನಿರ್ಬಂಧಗಳು ಹಾಗೂ ಕರ್ಫ್ಯೂ ಜಾರಿಯಲ್ಲಿದೆ. ಇದೇ ಆ.14ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಜಿಲ್ಲೆಯ ನ್ಯಾಯಾಲಯಗಳಲ್ಲಿ ನಡೆಯಲಿರುವ ಮೆಗಾ ಲೋಕ್ ಅದಾಲತ್‌ಗೆ ಹಾಜರಾಗುವ ಪಕ್ಷಕಾರರು, ದಾವೆದಾರರಿಗೆ ಮಾತ್ರ ವಾರಾಂತ್ಯ ಕರ್ಪ್ಯೂನಿಂದ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ವಾರಾಂತ್ಯ ಕರ್ಫ್ಯೂ ಹಿನ್ನೆಲೆಯಲ್ಲಿ ಮೆಗಾ ಲೋಕ್ ಅದಾಲತ್‌ಗೆ ಹಾಜರಾಗುವವರಿಗೆ ವಿನಾಯಿತಿ ನೀಡುವಂತೆ ಜಿಲ್ಲಾ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕೋರಿಕೆಯಂತೆ ಕೋವಿಡ್ ಸಮುಚಿತ ವರ್ತನೆಗಳನ್ನು ಕಡ್ಡಾಯವಾಗಿ ಪಾಲಿಸಿ, ಅಂದು ವಿನಾಯಿತಿ ನೀಡಲಾಗಿದೆ. ಪಕ್ಷಕಾರರು, ದಾವೆದಾರರು ಅಧಿಕೃತ ಗುರುತಿನ ಚೀಟಿ ಹೊಂದಿಕೊಂಡವರಿಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ಡಿಸಿ ಹೇಳಿದ್ದಾರೆ.

ಕೇರಳದಿಂದ ಮೆಗಾ ಲೋಕ್ ಅದಾಲತ್ ಉದ್ದೇಶಕ್ಕೆ ಹಾಜರಾಗುವ ಪಕ್ಷಕಾರರು, ದಾವಾದಾರರು ಕೋವಿಡ್ ಲಸಿಕೆ ಪಡೆದಿದ್ದರೂ (2 ಡೋಸ್ ಆಗಿದ್ದರೂ) ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಹಾಜರುಪಡಿಸಿದ ನಂತರವೇ ಪ್ರವೇಶಿಸಲು ಅನುಮತಿಸಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News