ಎನ್ಐಎ ತನಿಖೆಯ ಬಗ್ಗೆ ಗೊಂದಲ ಸೃಷ್ಟಿ ಬೇಡ: ಯು.ಟಿ.ಖಾದರ್
ಮಂಗಳೂರು, ಆ.13: ಎನ್ಐಎ ತನಿಖೆಯ ಬಗ್ಗೆ ಅನಗತ್ಯವಾದ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ. ತನಿಖೆಯಿಂದ ಸತ್ಯ ಹೊರಬೀಳುತ್ತದೆ. ಅಲ್ಲಿಯವರೆಗೆ ತಾಳ್ಮೆ ವಹಿಸಬೇಕು. ಈ ನಿಟ್ಟಿನಲ್ಲಿ ತಾಳ್ಮೆ ವಹಿಸಿರುವ ಉಳ್ಳಾಲದ ಜನತೆಯನ್ನು ಅಭಿನಂದಿಸುವುದಾಗಿ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳ್ಳಾಲದ ಜನತೆ ಸೌಹಾರ್ದದಲ್ಲಿ ಇದ್ದಾರೆ. ಅವರ ನಡುವೆ ಕೆಲವರು ಪ್ರತಿಭಟನೆ, ಹೇಳಿಕೆ ಗೊಂದಲ ಸೃಷ್ಟಿಸಲು ಯತ್ನಿಸುತ್ತಿರುವುದು ಸರಿಯಲ್ಲ. ಉಳ್ಳಾಲದ ಜನತೆ ಈ ಹಿಂದೆಯೂ ಭಯೋತ್ಪಾದನೆಗೆ ಬೆಂಬಲ ನೀಡಿಲ್ಲ. ಅಂತಹ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ ಎಂದರು.
ಲವ್ ಜಿಹಾದ್ ಬಗ್ಗೆ ಕಾನೂನು ತರುತ್ತೇವೆ ಎಂದು ಬಿಜೆಪಿ ಹೇಳಿದೆ. ಆ ರೀತಿಯ ಕಾನೂನು ಏಕೆ ಮಾಡಲಿಲ್ಲ. ಪ್ರತಿಭಟನೆ ಮಾಡುವವರು ಆ ಕಾನೂನು ಜಾರಿ ಮಾಡಲು ಸರಕಾರವನ್ನು ಏಕೆ ಒತ್ತಾಯ ಮಾಡುತ್ತಿಲ್ಲ? ಜನರಲ್ಲಿ ಏಕೆ ಗೊಂದಲ ಸೃಷ್ಟಿಸುತ್ತಿದ್ದಾರೆ ? ಪ್ರತಿಭಟನೆ ಮಾಡುವವರು ಬಿಜೆಪಿ ಕಚೇರಿಯ ಮುಂದೆ ಪ್ರತಿಭಟನೆ ಮಾಡಲಿ ಎಂದು ಖಾದರ್ ಹೇಳಿದ್ದಾರೆ.
*ಮುಖ್ಯಮಂತ್ರಿಗೆ ಅವಮಾನ ಮಾಡುವ ಹೇಳಿಕೆ ಸರಿಯಲ್ಲ :
ತಲಪಾಡಿ ಗಡಿ ಪ್ರದೇಶದಲ್ಲಿ ಮುಖ್ಯಮಂತ್ರಿ ಭೇಟಿ ಕಾರ್ಯಕ್ರಮದಲ್ಇ ಅಂತಿಮ ಕ್ಷಣದಲ್ಲಿ ಬದಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿಗೆ ಅವಮಾನವಾಗುವ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಮುಖ್ಯಮಂತ್ರಿ ಮಂಗಳೂರಿಗೆ ಭೇಟಿ ನೀಡಿ ಗಡಿ ನಿರ್ಬಂಧದ ಬಗ್ಗೆ ಚರ್ಚಿಸಿದ್ದಾರೆ. ಆದ್ದರಿಂದ ಮತ್ತೆ ಗಡಿಭಾಗಕ್ಕೆ ಅವರೇ ಖುದ್ದು ಭೇಟಿ ನೀಡಬೇಕಾದ ಅನಿವಾರ್ಯ ಕಂಡುಬರುವುದಿಲ್ಲ. ಈ ಬಗ್ಗೆ ಅವಮಾನಕಾರಿ ಹೇಳಿಕೆಗೆ ತನ್ನ ಬೆಂಬಲ ಇಲ್ಲ ಎಂದು ಯು.ಟಿ.ಖಾದರ್ ಹೇಳಿದ್ದಾರೆ.
*ರಾಜ್ಯದಲ್ಲಿ ಹೆಲ್ತ್ ಕಮಿಷನ್ ಜಿಲ್ಲೆಗಳಿಗೆ ಅಗತ್ಯವಿರುವ ಆರೋಗ್ಯ ಮೂಲ ಸೌಕರ್ಯಗಳ ಸಾಮಗ್ರಿಗಳನ್ನು ವಿತರಿಸಬೇಕು. ಅದು ಜಿಲ್ಲೆಗಳಿಗೆ ಸರಬರಾಜು ಆಗದಿದ್ದರೆ ಜಿಲ್ಲಾಧಿಕಾರಿ ಹೊಣೆಗಾರರಾಗುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಗೆ ರಾಜ್ಯದಿಂದ ಸರಬರಾಜು ಆಗಬೇಕಾಗಿದ್ದ ಗ್ಲೌಸ್, ಮಾಸ್ಕ್ ಸರಬರಾಜು ಆಗಿಲ್ಲ. ದಾದಿಯರಿಗೆ ನರ್ಸ್ ಗಳಿಗೆ ಅಗತ್ಯ ವಾದ ಸುರಕ್ಷಾ ಸಾಮಗ್ರಿಗಳು ಸರಬರಾಜಾಗಬೇಕು. ಈ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದಿರುವುದಾಗಿ ಯು.ಟಿ.ಖಾದರ್ ತಿಳಿಸಿದ್ದಾರೆ.
*ಉಳ್ಳಾಲದಲ್ಲಿ ಸೋನು ಸೂದ್ ಮತ್ತು ಜಿಲ್ಲಾಡಳಿತದ ಸಹಾಯದಿಂದ ಆಕ್ಸಿಜನ್ ಘಟಕ ಆರಂಭವಾಗಲಿದೆ. ಈ ಘಟಕ ನಿರ್ಮಾಣಕ್ಕೆ ಸೋನು ಸೂದ್ 45 ಲಕ್ಷ ರೂ. ಹಾಗೂ ಜಿಲ್ಲಾಡಳಿತ 15 ಲಕ್ಷ ರೂ. ನೆರವು ನೀಡಿದೆ. ಇದಕ್ಕಾಗಿ ಸೋನು ಸೂದ್ ಮತ್ತು ಜಿಲ್ಲಾಡಳಿತ ಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಪಂ ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳಾದ ಸದಾಶಿವ ಉಳ್ಳಾಲ್, ಶಶಿಕಲಾ, ಫಾರೂಕ್ ತುಂಬೆ, ಸಮೀರ್, ಝಕರಿಯ ಮೊದಲಾದವರು ಉಪಸ್ಥಿತರಿದ್ದರು.