×
Ad

ಆ.16ರಿಂದ ವಿಸ್ಟಾಡೋಮ್ ಸಹಿತ ಕಾರವಾರ-ಬೆಂಗಳೂರು, ಯಶವಂತಪುರ ನಡುವೆ ರೈಲು ಓಡಾಟ

Update: 2021-08-13 18:41 IST

ಉಡುಪಿ, ಆ.13: ಕೋವಿಡ್ ಕಾರಣದಿಂದ ಭಾಗಶಃ ಸಂಚಾರವನ್ನು ಮೊಟಕುಗೊಳಿಸಿದ್ದ ಬೆಂಗಳೂರು ಯಶವಂತಪುರ-ಕಾರವಾರ (ರೈಲು ನಂ. 06211/12) ಬೆಳಗಿನ ರೈಲು, ಆ.16ರ ಸೋಮವಾರದಿಂದ ಹೊಸ ವಿಸ್ಟಾಡೋಮ್ ಕೋಚಿನೊಂದಿಗೆ ಪುನರಾರಂಭಗೊಳ್ಳಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಕೋವಿಡ್ ಕಾರಣದಿಂದ ಬೆಂಗಳೂರು-ಕಾರವಾರ ಬೆಳಗಿನ ರೈಲು ಸಂಚಾರ ವನ್ನು ಕಳೆದ ಮೇ 3 ಮತ್ತು 4ರಿಂದ ಮಂಗಳೂರಿನಿಂದ ಕಾರವಾರದ ತನಕ ರೈಲ್ವೆ ಇಲಾಖೆ ಸ್ಥಗಿತಗೊಳಿಸಿತ್ತು. ರೈಲು ಮಂಗಳೂರು ಮತ್ತು ಬೆಂಗಳೂರು ನಡುವೆ ಓಡಾಟ ನಡೆಸುತ್ತಿತ್ತು. ಇದೀಗ ಈ ಭಾಗದ ಪ್ರಯಾಣಿಕರು ಹಾಗೂ ಸಾರ್ವಜನಿಕರು ವಿಸ್ಟಾಡೋಮ್‌ನೊಂದಿಗೆ ರೈಲನ್ನು ಕಾರವಾರದಿಂದ ಪುನರಾರಂಭಿಸಲು ಕೇಂದ್ರದ ಮೇಲೆ ಒತ್ತಡ ಹೇರುವಂತೆ ಉಡುಪಿ- ಚಿಕ್ಕಮಗಳೂರು ಸಂಸತ್ ಸದಸ್ಯೆಯಾಗಿರುವ ಶೋಭಾ ಕಂದ್ಲಾಜೆ ಅವರನ್ನು ಒತ್ತಾಯಿಸಿದ್ದರು.

ಈ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಕಾರವಾರ-ಬೆಂಗಳೂರು ಹಗಲು ರೈಲನ್ನು ಪುರಾರಾರಂಭಿಸುವಂತೆ ಮನವಿ ಮಾಡಿದ್ದರು. ಸಹೋದ್ಯೋಗಿಯ ಮನವಿಯನ್ನು ಪುರಸ್ಕರಿಸಿದ ರೈಲ್ವೆ ಸಚಿವರು ಕಾರವಾರ-ಬೆಂಗಳೂರು ಬೆಳಗಿನ ರೈಲನ್ನು ಪುನರಾರಂಭಿಸಲು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೀಗ ನೈರುತ್ವ ರೈಲ್ವೆ ಬೆಂಗಳೂರು-ಕಾರವಾರ ರೈಲನ್ನು ಆ.16ರಿಂದ ಪುನರಾರಂಭಿಸುತ್ತಿದೆ ಹಾಗು ಒಂದು ಹೊಸ ವಿಸ್ಟಾಡೋಮ್ ಕೋಚ್ ಕೂಡ ಈ ರೈಲಿಗೆ ಸೇರ್ಪಡೆಗೊಳ್ಳಲಿದೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದರಿಂದ ಕಾರವಾರ ಹಾಗೂ ಬೆಂಗಳೂರು ನಡುವಿನ ಪ್ರಕೃತಿ ರಮಣೀಯ ಪಶ್ಚಿಮ ಘಟ್ಟಗಳ ಹಾಗು ಕರಾವಳಿಯ ಅರಬೀ ಸಮುದ್ರದ ವಿಹಂಗಮ ನೋಟ ಗಳನ್ನು ರೈಲ್ವೆ ಪ್ರಯಾಣದ ನಡುವೆಯೇ ಕಣ್ತುಂಬಿಕೊಳ್ಳಬಹುದು ಎಂದಿರುವ ಶೋಭಾ ಕರಂದ್ಲಾಜೆ, ಯಾತ್ರಿಗಳಿಗೆ ಶುಭ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News