×
Ad

ವಿಶ್ವ ಚಾಂಪಿಯನ್‌ ಶಿಪ್ ಡ್ಯಾನ್ಸ್‌ ಸ್ಪೋರ್ಟ್‌ಗೆ ಮಣಿಪಾಲದ ಅರ್ಚನಾ

Update: 2021-08-13 18:52 IST

ಉಡುಪಿ, ಆ.13: ಆಸ್ಟ್ರಿಯ ದೇಶದ ಗ್ರಾಝ್‌ನಲ್ಲಿ ಆ.20ರಂದು ನಡೆಯುವ ಮೊತ್ತಮೊದಲ ವಿಶೇಷ ಒಲಿಂಪಿಕ್ಸ್ ಡ್ಯಾನ್ಸ್ ಸ್ಪೋರ್ಟ್ ವಿಶ್ವ ಚಾಂಪಿಯನ್‌ ಶಿಪ್‌ನಲ್ಲಿ ಮಣಿಪಾಲದ ಅರ್ಚನಾ ಜೈವಿಠಲ್ ಭಾರತವನ್ನು ಪ್ರತಿನಿಧಿಸಿ ಸ್ಪರ್ಧೆಯೊಂದರಲ್ಲಿ ಭಾಗವಹಿಸಲಿದ್ದಾರೆ.

ಡ್ಯಾನ್ಸ್‌ಸ್ಪೋರ್ಟ್‌ಗೆ ವಿಶೇಷ ಒಲಿಂಪಿಕ್ಸ್‌ನಲ್ಲಿ ಅಧಿಕೃತ ಮಾನ್ಯತೆ ದೊರಕಿದ್ದು 2019ರಲ್ಲಿ. ಇದೀಗ ಈ ಕ್ರೀಡೆಯ ಮೊತ್ತ ಮೊದಲ ವಿಶ್ವ ಚಾಂಪಿಯನ್‌ ಶಿಪ್‌ ಆಸ್ಟ್ರಿಯದಲ್ಲಿ ನಡೆಯಲಿದೆ. ಇದರಲ್ಲಿ ಭಾರತ, ಅಮೆರಿಕ, ನಾರ್ವೆ, ಉಕ್ರೇನ್ ಸೇರಿದಂತೆ ವಿಶ್ವದ 13ದೇಶಗಳ ವಿಶೇಷ ನೃತ್ಯಗಾರರು ನಾಲ್ಕು ವಿಭಾಗಗಳಲ್ಲಿ (ಸೋಲೊ, ಜೋಡಿ, ದಂಪತಿ ಹಾಗೂ ಟೀಮ್) ಸ್ಪರ್ಧಿಸಲಿದ್ದಾರೆ.

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಹಾಗೂ ಮಣಿಪಾಲದ ಅರ್ಚನಾ ಟ್ರಸ್ಟ್ ನಡೆಸುತ್ತಿರುವ ‘ಆಸರೆ’ ಸಂಸ್ಥೆಯ ಅರ್ಚನಾ ಜೈವಿಠಲ್ ಎಂ.ಜೆ., ಕ್ಲಾಸಿಕಲ್ ಸೋಲೋ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಈ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಸ್ಪರ್ಧಿ ಇವರಾಗಿದ್ದಾರೆ.

ಅರ್ಚನಾ ಅವರು ಆ.19-20ರಂದು 90ನಿಮಿಷಗಳ ಕಾಲ ಏಕಾಂಗಿಯಾಗಿ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ದೇಶವನ್ನು ಪ್ರತಿನಿಧಿಸಿ ಪ್ರದರ್ಶನ ನೀಡಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅರ್ಚನಾ ಭರತನಾಟ್ಯದಲ್ಲಿ ವಿಶೇಷ ತರಬೇತಿ ಯನ್ನು ಪಡೆಯುತಿದ್ದಾರೆ. ಕೋವಿಡ್‌ನ ಸಾಂಕ್ರಾಮಿಕದ ಅವಧಿಯಲ್ಲೂ ಅವರು ನಿರಂತರವಾಗಿ ತರಬೇತಿಯನ್ನು ಪಡೆಯುತಿದ್ದರು.

2013ರಲ್ಲಿ ನಡೆದ ವಿಶೇಷ ಒಲಿಂಪಿಕ್ಸ್‌ನ ಈಜು ಸ್ಪರ್ಧೆಯಲ್ಲಿ ಅವರು ಕಂಚಿನ ಪದಕ ಪಡೆದು ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದರು.2019ರಲ್ಲಿ ಅಬುಧಾಬಿಯ ವಿಶ್ವ ಕ್ರೀಡಾಕೂಟದಲ್ಲಿ ಮತ್ತೊಮ್ಮೆ ಇದೇ ಸಾಧನೆಯನ್ನು ಪುನರಾವರ್ತಿಸಿದ್ದರು. ಡ್ಯಾನ್ಸ್‌ಸ್ಪೋರ್ಟ್‌ನಲ್ಲಿ ದೇಶವನ್ನು ಪ್ರತಿನಿಧಿಸಲು ಅರ್ಚನಾ ಅವರು ಶುಕ್ರವಾರ ಆಸ್ಟ್ರಿಯಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News