×
Ad

ಮಕ್ಕಳಿಂದ ಭಿಕ್ಷಾಟನೆಯ ವಿರುದ್ಧ ಅರ್ಜಿ ಕುರಿತು ಕೇಂದ್ರ, ದಿಲ್ಲಿ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2021-08-13 19:51 IST

ಹೊಸದಿಲ್ಲಿ ,ಆ.13: ದಿಲ್ಲಿಯ ರಸ್ತೆಗಳಲ್ಲಿ ಮಕ್ಕಳಿಂದ ಭಿಕ್ಷಾಟನೆಯನ್ನು ನಿವಾರಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕೇಂದ್ರ ಮತ್ತು ದಿಲ್ಲಿ ಸರಕಾರಗಳಿಗೆ ನೋಟಿಸ್ಗಳನ್ನು ಹೊರಡಿಸಿರುವ ದಿಲ್ಲಿ ಉಚ್ಚ ನ್ಯಾಯಾಲಯವು, ಅರ್ಜಿಗೆ ಉತ್ತರಿಸುವಂತೆ ದಿಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ದಿಲ್ಲಿ ಪೊಲೀಸರಿಗೂ ನಿರ್ದೇಶ ನೀಡಿದೆ.

ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು,ಶಿಶುಗಳನ್ನು ಬಳಸಿ ಮಹಿಳೆಯರು,ಹದಿಹರೆಯದ ಬಾಲಕಿಯರು ಮತ್ತು ಸಣ್ಣಮಕ್ಕಳನ್ನು ಭಿಕ್ಷಾಟನೆಗೆ ಮತ್ತು ಅಪರಾಧ ಕೂಪಕ್ಕೆ ತಳ್ಳುವವರು ಮತ್ತು ಯುವತಿಯರನ್ನು ಶೋಷಿಸುವವರನ್ನು ಗುರುತಿಸಿ ಬಂಧಿಸುವಂತೆ ಅಧಿಕಾರಿಗಳಿಗೆ ನಿರ್ದೇಶ ನೀಡುವಂತೆ ಅರ್ಜಿದಾರ ಅಜಯ ಗೌತಮ ಕೋರಿಕೊಂಡಿದ್ದಾರೆ.

ನಗರದ ಪ್ರತಿಯೊಂದೂ ಭಾಗದಲ್ಲಿ ಭಿಕ್ಷುಕರಿದ್ದರೂ ಈ ಪಿಡುಗನ್ನು ತಡೆಯಲು ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿರುವ ಗೌತಮ,ಮಕ್ಕಳಿಂದ ಭಿಕ್ಷಾಟನೆಯ ಹಿಂದೆ ಮಾಫಿಯಾವೊಂದು ಸಕ್ರಿಯವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ ಮತ್ತು ವಾಸ್ತವದಲ್ಲಿ ಈ ಮಾಫಿಯಾ ಅಮಾಯಕ ಮಕ್ಕಳನ್ನು ಅಪಹರಿಸಿ ಬಲವಂತದಿಂದ ಅವರನ್ನು ಭಿಕ್ಷಾಟನೆಗೆ ತಳ್ಳುತ್ತಿದೆ. ಜನರ ಗರಿಷ್ಠ ಸಹಾನುಭೂತಿಯನ್ನು ಪಡೆಯಲು ಸಣ್ಣಮಕ್ಕಳನ್ನು ಉದ್ದೇಶಪೂರ್ವಕವಾಗಿ ಗಾಯಗೊಳಿಸಲಾಗುತ್ತದೆ,ಅಂಗಹೀನರನ್ನಾಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಮಕ್ಕಳ ಏಳಿಗೆಗಾಗಿ ಅತ್ಯುತ್ತಮ ಅವಕಾಶಗಳನ್ನು ಒದಗಿಸಲು ಮತ್ತು ಅವರ ಶೋಷಣೆಯನ್ನು ತಡೆಯಲು ಸರಕಾರವು ಪ್ರಯತ್ನಿಸುವುದನ್ನು ಭಾರತದ ಸಂವಿಧಾನವು ಕಡ್ಡಾಯಗೊಳಿಸಿದೆ ಎಂದೂ ಅವರು ವಾದಿಸಿದ್ದಾರೆ.

ಉಚ್ಚ ನ್ಯಾಯಾಲಯವು ಸೆ.27ರಂದು ಅರ್ಜಿಯ ಮುಂದಿನ ವಿಚಾರಣೆಯನ್ನು ನಿಗದಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News