ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ : ಮಂಗಳೂರಿನ ಹೈಮಾನ್ ರಾಷ್ಟ್ರಮಟ್ಟಕ್ಕೆ ಆಯ್ಕೆ
ಮಂಗಳೂರು, ಆ.13: ಪ್ರತಿಷ್ಠಿತ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ವಿಭಾಗದಲ್ಲಿ ನಗರದ ಬಜ್ಪೆಯ ಹೈಮಾನ್ ಎಂಬವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಾಕೊ ಇಂಡಿಯಾ, ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಶನ್ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮೈಸೂರಿನಲ್ಲಿ ನಡೆದ ಪ್ರಥಮ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಬಂಗಾರದ ಪದಕ ಗೆದ್ದು ಮಂಗಳೂರಿನ ಹೈಮಾನ್ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ರಾಜ್ಯ ಮಟ್ಟದಲ್ಲಿ ರಿಂಗ್ ಫೈಟ್ ಲೋ ಕಿಕ್ ವಿಭಾಗದಲ್ಲಿ ಸ್ಪರ್ಧಿಸಿ ಪ್ರಶಸ್ತಿ ಗೆದ್ದಿರುವ ಹೈಮಾನ್ ಅವರು ಮಾರ್ಷಲ್ ಆರ್ಟ್ಸ್‌ನ ಕರಾಟೆ ಹಾಗೂ ಇತರ ಮಾದರಿಗಳಲ್ಲಿಯೂ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಿ ಪದಕಗಳನ್ನು ಜಯಿಸಿದ್ದಾರೆ.
ಸದ್ಯ ಕಿಕ್ ಬಾಕ್ಸಿಂಗ್‌ನಲ್ಲಿಯೂ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಕರಾವಳಿಯ ಮಾರ್ಷಲ್ ಆರ್ಟ್ಸ್ ಪ್ರಿಯರಿಗೆ ಹರುಷ ತಂದಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲೂ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ರಾಷ್ಟ್ರ ಮಟ್ಟದ ಕಿಕ್‌ಬಾಕ್ಸಿಂಗ್ ಚಾಂಪಿಯನ್ ಶಿಪ್ ಗೋವಾದಲ್ಲಿ ಆ.26ರಂದು ನಡೆಯಲಿದೆ. ಇದರಲ್ಲಿ ಆಯ್ಕೆಯಾದರೆ ಬ್ಯಾಂಕಾಕ್‌ನಲ್ಲಿ ನಡೆಯಲಿರುವ ಏಷ್ಯನ್ ಇಂಡೋರ್ ಹಾಗೂ ಮಾರ್ಷಲ್ ಆರ್ಟ್ಸ್ ಗೇಮ್ಸ್‌ನಲ್ಲಿ ಭಾರತವನ್ನು ಈ ಯುವಕ ಪ್ರತಿನಿಧಿಸಲಿದ್ದಾರೆ ಎನ್ನುವುದು ಕರಾವಳಿಯ ಹೆಮ್ಮೆಯ ವಿಚಾರವಾಗಿದೆ.
ಹೈಮಾನ್ ಮಾರ್ಷಲ್ ಆರ್ಟ್ಸ್ ತರಬೇತುದಾರ ನಿತಿನ್ ಎನ್.ಸುವರ್ಣ ಹಾಗೂ ಸಹಾಯಕ ತರಬೇತುದಾರ ಸಂಪತ್ ಕುಮಾರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.