×
Ad

ಉಡುಪಿ ಮನೆ ನಿವೇಶನ ಹಗರಣದ ಸಂತ್ರಸ್ಥರಿಂದ ಆ.15ರಂದು ‘ನಮ್ಮ ನಡೆ ಬೆಣಗಲ್ ಕಡೆಗೆ’ ಪಾದಯಾತ್ರೆ

Update: 2021-08-13 21:04 IST

ಉಡುಪಿ, ಆ.13: ಉಡುಪಿಯ ಮನೆ ನಿವೇಶನ ಹಗರಣದ ಸಂತ್ರಸ್ಥರು ಆ.15ರಂದು ಬೆಳಗ್ಗೆ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಿಂದ ಬ್ರಹ್ಮಾವರ ತಾಲೂಕು ಬೆಣಗಲ್‌ವರೆಗೆ ‘ನಮ್ಮ ನಡೆ ಬೆಣಗಲ್ ಕಡೆಗೆ’ ಹಮ್ಮಿಕೊಂಡಿದ್ದಾರೆ.

ಬೆಣಗಲ್ ಎಂಬುದು ದೇಶದ ರಾಜನೀತಿಜ್ಞ, ಸಂವಿಧಾನತಜ್ಞ, ವಿದ್ವಾಂಸ ಬೆಣಗಲ್ ನರಸಿಂಗರಾಯರ ಹುಟ್ಟೂರು. ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಭಾರತದ ಸಂವಿಧಾನ ರೂಪಿಸಿದ ಭಾರತ ಸಂವಿಧಾನ ಸಂರಚನಾ ಸಮಿತಿಯ ಸಲಹೆಗಾರರಾಗಿದ್ದವರು ಬೆಣಗಲ್ ನರಸಿಂಹರಾಯರು.

ಸಂವಿಧಾನ ರೂಪಿಸಿದ ದೇಶದ ಧೀಮಂತರು ಕಂಡ ‘ಸರ್ವರಿಗೂ ಸಮಪಾಲು, ಸಮಬಾಳು’ ಕನಸು ಇಂದು ಛಿದ್ರವಾಗಿದೆ. ಒಂದು ಕಾಲದಲ್ಲಿ ವಿದ್ಯೆ, ಶಿಕ್ಷಣ, ಸಂಸ್ಕೃತಿ, ಮಾನವೀಯ ವೌಲ್ಯ, ನ್ಯಾಯಪರತೆಯ ಸಾಕಾರರೂಪ ದಂತಿದ್ದ ಬೆಣಗಲ್ ಮನೆ ಇಂದು ಇಲ್ಲವಾಗಿ ಆ ಜಾಗವೀಗ ‘ಸಾರಸ್ವತರಡಿ’ ಎಂಬ ಹಾಳುದಿಬ್ಬವಾಗಿ ನಾಡಿನ ಅವನತಿಗೆ ಸಂಕೇತದಂತಿದೆ. ಈ ಬಗ್ಗೆ ನಾವಿಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇಂಥ ಆತ್ಮಶೋಧನೆಯ ಮೊದಲ ಹೆಜ್ಜೆ ‘ನಮ್ಮ ನಡೆ ಬೆಣಗಲ್ ಕಡೆಗೆ’ ಎಂದು ಪಾದಯಾತ್ರೆಯ ಸಂಘಟಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆ.15ರ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬೆಳಗ್ಗೆ 7 ಕ್ಕೆ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಡಾ.ಅಂಬೇಡ್ಕರ್ ಪ್ರತಿಮೆಯ ಎದುರು ರಾಷ್ಟ್ರಧ್ವಜ ಅರಳಿಸಿ ಬೆಣಗಲ್‌ಗೆ ಪಾದಯಾತ್ರೆ ಪ್ರಾರಂಭಗೊಳ್ಳಲಿದೆ. ಒಟ್ಟು 26 ಕಿ.ಮೀ. ದೂರದ ಪಾದಯಾತ್ರೆ ಸಂಜೆ 4 ಕ್ಕೆ ಸಾರಸ್ವತರಡಿಯಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಹೇಳಿಕೆ ತಿಳಿಸಿದೆ.

ಪಾದಯಾತ್ರೆಯ ವೇಳೆ ಯಾವುದೇ ಸಭೆ, ಭಾಷಣ, ಘೋಷಣೆ, ಬ್ಯಾನರ್ ಇರುವುದಿಲ್ಲ. ದೇಶದ ಇಂದಿನ ದುಸ್ಥಿತಿ ಬಗ್ಗೆ ಆತಂಕಗೊಂಡಿರುವ ಯಾವುದೇ ನಾಗರಿಕ ಇದರಲ್ಲಿ ಭಾಗವಹಿಸಬಹುದು. ಯಾವುದೇ ಪಕ್ಷ, ಧರ್ಮ, ಅಜೆಂಡಾಗಳಿಗೆ ಅವಕಾಶವಿಲ್ಲ. ಇದು ರಾಜಕೀಯ ಶುದ್ಧೀಕರಣಕ್ಕಾಗಿ ರಾಜಕೀಯೇತರ ಪಾದಯಾತ್ರೆ ಇದಾಗಿದೆ ಎಂದು ಸಂಘಟಕರು ಹೇಳಿದ್ದಾರೆ.

ಉಡುಪಿಯಲ್ಲಿ ನ್ಯಾಯಯುತವಾಗಿ ಮನೆ ನಿವೇಶನಗಳನ್ನು ಖರೀಸಿದರೂ, ಕಂದಾಯ ಇಲಾಖೆ ಹಾಗೂ ಭೂಮಾಫಿಯಾ ಮಾಡಿದ ವಂಚನೆ ಯಿಂದ ಹಾಗೂ ನ್ಯಾಯಾಲಯದ ವೌನದಿಂದ ನೊಂದ ಸಾಮಾನ್ಯ ಪ್ರಜೆಗಳೇ ನಿವೇಶನ ಹಗರಣದ ಸಂತ್ರಸ್ಥರಾಗಿದ್ದು, ಈ ಪಾದಯಾತ್ರೆ ಸಂಘಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News