ಬ್ರಿಟನ್: ಅಜ್ಞಾತ ವ್ಯಕ್ತಿಯಿಂದ ಗುಂಡಿನ ದಾಳಿ; 3 ಮಹಿಳೆಯರ ಸಹಿತ 6 ಮಂದಿ ಮೃತ್ಯು

Update: 2021-08-13 17:59 GMT

ಲಂಡನ್, ಆ.13: ನೈಋತ್ಯ ಇಂಗ್ಲೆಂಡಿನ ಪ್ಲೈವೌತ್ ನಗರದಲ್ಲಿ ಗುರುವಾರ ಸಂಜೆ ಬಂಧೂಕುಧಾರಿಯೊಬ್ಬ ಮನೆಯೊಂದರ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ 6ಮಂದಿ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ. ‌

ಪ್ಲೈವೌತ್ ನಗರದ ಕೆಹ್ಯಾಮ್ ಪ್ರದೇಶದಲ್ಲಿ ಗುಂಡು ಹಾರಾಟದ ಪ್ರಕರಣದ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆಯೇ ಸಶಸ್ತ್ರ ಪೊಲೀಸರನ್ನು ಹಾಗೂ ವೈದ್ಯ ಸಹಾಯಕರ ತಂಡವನ್ನು ಅಲ್ಲಿಗೆ ರವಾನಿಸಲಾಗಿದೆ. ಗುಂಡಿನ ದಾಳಿಯಿಂದ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೊಬ್ಬ ಮಹಿಳೆ ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ ಡೆವಾನ್ ಮತ್ತು ಕಾರ್ನ್ವಾಲ್ ಪೊಲೀಸರು ಹೇಳಿದ್ದಾರೆ.
 
ಕಪ್ಪು ಮತ್ತು ಬೂದು ಬಣ್ಣದ ಬಟ್ಟೆ ಧರಿಸಿದ್ದ ಬಂದೂಕುಧಾರಿಯೊಬ್ಬ ಮನೆಯೊಂದರ ಬಾಗಿಲಿಗೆ ಕಾಲಿನಿಂದ ಒದ್ದ ಬಳಿಕ ಮನೆಯೊಳಗಿದ್ದ ಯುವಮಹಿಳೆ ಮತ್ತು ಆಕೆಯ ಪುತ್ರಿಯ ಮೇಲೆ ಗುಂಡು ಹಾರಿಸಿದ್ದಾನೆ. ಬಳಿಕ ಮನೆಯ ಹಿಂಬದಿಯಲ್ಲಿದ್ದ ಪಾರ್ಕ್ ಮೂಲಕ ಓಡಿ ಅಲ್ಲಿದ್ದವರ ಮೇಲೆಯೂ ಗುಂಡು ಹಾರಿಸಿ ತಪ್ಪಿಸಿಕೊಂಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಯಾಗಿದ್ದ ಸ್ಥಳೀಯ ಮಹಿಳೆಯೊಬ್ಬರು ಮಾಹಿತಿ ನೀಡಿದ್ದಾರೆ. 

ಈ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಬ್ರಿಟನ್ನ ಗೃಹ ಇಲಾಖೆ ಕಾರ್ಯದರ್ಶಿ ಪ್ರೀತಿ ಪಟೇಲ್, ಪೊಲೀಸರ ಸಲಹೆ ಪಾಲಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News