ಭಾರತ ಲಸಿಕೆ ಗುರಿ ತಲುಪುವುದು ಅನುಮಾನ: ಸಿಐಐ ಮುಖ್ಯಸ್ಥ
ಹೊಸದಿಲ್ಲಿ, ಆ.14: ಭಾರತದಲ್ಲಿ ಲಸಿಕೆ ಡೋಸ್‌ಗಳನ್ನು ಮಿಶ್ರ ಮಾಡುವ ಪ್ರಸ್ತಾವ ಕೆಟ್ಟ ನಿರ್ಧಾರ ಎಂದು ದೇಶದ ಪ್ರಮುಖ ಲಸಿಕೆ ಉತ್ಪಾದನಾ ಕಂಪೆನಿಯಾದ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಸಿಐಐ) ಅಧ್ಯಕ್ಷ ಸೈರಸ್ ಪೂನಾವಾಲಾ ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಆರು ತಿಂಗಳ ಹಿಂದೆ ಲಸಿಕೆ ಪಡೆದವರಿಗೆ ಬೂಸ್ಟರ್ ಡೋಸ್‌ಗಳನ್ನು ನೀಡುವುದು ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ. 2021ರ ಡಿಸೆಂಬರ್ ಒಳಗಾಗಿ ಎಲ್ಲ ಭಾರತೀಯರಿಗೆ ಲಸಿಕೆ ನೀಡುವ ಗುರಿಯನ್ನು ತಲುಪುವುದು ಅನುಮಾನ ಎಂದು ಅವರು ಹೇಳಿದ್ದಾರೆ.
ಅಮೆರಿಕ ಮೂಲದ ನೋವಾವ್ಯಾಕ್ಸ್ ಕಂಪೆನಿ ಅಭಿವೃದ್ಧಿಪಡಿಸಿದ ಪರಿಣಾಮಕಾರಿ ಲಸಿಕೆಯ ಭಾರತ ಅವತರಣಿಕೆ ಉತ್ಪಾದನೆಗೆ ಲೈಸಸ್ ಪಡೆಯುವುದು ಅನುಮಾನವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿಶ್ವದಲ್ಲೇ ಅತಿದೊಡ್ಡ ಲಸಿಕಾ ಉತ್ಪಾದನಾ ಕಂಪೆನಿ ಎನಿಸಿರುವ ಎಸ್‌ಐಐ ಸಂಸ್ಥಾಪಕರಾಗಿರುವ ಪೂನಾವಾಲಾ, ಪುಣೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ವಿವಿಧ ಕಾಲಘಟ್ಟದಲ್ಲಿ ಲಸಿಕೆ ಉತ್ಪಾದಕರಿಗೆ ನಿಯಂತ್ರಣಾತ್ಮಕ ಪ್ರಕ್ರಿಯೆಗಳನ್ನು ಸುಲಲಿತಗೊಳಿಸಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಆದರೆ ಎರಡು ಕೋವಿಶೀಲ್ಡ್ ಲಸಿಕಾ ಡೋಸ್‌ಗಳ ನಡುವಿನ ಅಂತರ ಎರಡು ತಿಂಗಳು ಮಾತ್ರ ಇರಬೇಕು ಎಂದು ಒತ್ತಿ ಹೇಳಿದ ಅವರು, ಡೋಸ್‌ಗಳ ರಫ್ತು ನಿಷೇಧಿಸಿರುವ ಸರ್ಕಾರದ ಕ್ರಮವನ್ನು ಟೀಕಿಸಿದರು.
ಡಿಸೆಂಬರ್ 31ರೊಳಗೆ ಲಸಿಕೆ ಗುರಿ ತಲುಪುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ನಾವು ಇನ್ನೂ ಉತ್ಪಾದನೆ ಸಾಮರ್ಥ್ಯವನ್ನು 10 ಕೋಟಿಗೆ ಹೆಚ್ಚಿಸಿಲ್ಲ. ವಿಶ್ವದಲ್ಲಿ ಯಾವ ಕಂಪೆನಿಯೂ ಒಂದು ತಿಂಗಳಲ್ಲಿ 10 ಕೋಟಿ ಲಸಿಕೆಗಳನ್ನು ತಯಾರಿಸಲಾಗದು. ಈ ಮೊದಲೇ ನಾವು ಹೂಡಿಕೆ ಮಾಡಿದ ಹಿನ್ನೆಲೆಯಲ್ಲಿ ವಾರ್ಷಿಕವಾಗಿ 110-120 ಕೋಟಿ ಡೋಸ್‌ಗಳನ್ನು ಪೂರೈಸುವ ಭರವಸೆ ನೀಡಿದ್ದೆವು. ಇತರ ಉತ್ಪಾದಕರು ಮಾಸಿಕ 1-2 ಕೋಟಿ ಡೋಸ್‌ಗಳನ್ನು ಉತ್ಪಾದಿಸಿದರೆ ಅದಕ್ಕೆ ಅನುಗುಣವಾಗಿ ಉತ್ಪಾದನೆ ಹೆಚ್ಚಬಹುದು" ಎಂದು ಹೇಳಿದರು.
ಲಸಿಕೆಗಳ ರಫ್ತಿಗೆ ನಿಷೇಧ ವಿಧಿಸಿರುವ ಸರ್ಕಾರದ ಕ್ರಮ ಕೆಟ್ಟ ನಡೆ ಎಂದು ಅವರು ಬಣ್ಣಿಸಿದರು. "ನಾನು ಬಾಯಿ ಬಿಡದಂತೆ ಪುತ್ರ (ಎಸ್‌ಐಐ ಸಿಇಓ ಅಧರ್ ಪೂನಾವಾಲಾ) ಹೇಳಿದ್ದಾರೆ. ಆದರೆ ನನ್ನ ಅಭಿಪ್ರಾಯದ ಪ್ರಕಾರ ರಫ್ತು ಮುಕ್ತಗೊಳಿಸಬೇಕು" ಎಂದರು.